ಹೊನ್ನಾವರ ತಾಲೂಕಿನ ಕೆಂಚಗಾರ್ ಊರಿನಿಂದ 15 ಜನ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಬರಿಗಾಲಿನಲ್ಲಿ 300 ಕಿಲೋಮೀಟರ್ ದೂರವನ್ನು 6 ದಿನಗಳಲ್ಲಿ ಕೃಮಿಸಿ ಧರ್ಮಸ್ಥಳ ತಲುಪುವ ಈ ಪಾದಯಾತ್ರೆಯ ವಿಶೇಷ ವರದಿ ಇಲ್ಲಿದೆ.

ಹೊನ್ನಾವರ ತಾಲೂಕಿನ ಕೆಂಚಗಾರ್ ರಮೇಶ್ ನಾಯ್ಕ್ ನೇತೃತ್ವದಲ್ಲಿ ಊರಿನ ಹಾಗೂ ಸುತ್ತ ಮುತ್ತಲ ಊರಿನ ಭಕ್ತಾದಿಗಳು ಸೇರಿ ಒಟ್ಟು 15 ಜನ ಯಾತ್ರಾರ್ಥಿಗಳು “ನಮ್ಮ ನಡಿಗೆ ಮುಂಜುನಾಥನ ಕಡೆಗೆ” ಎಂಬಂತೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ.
ಮುಂಜಾನೆ ಕೆಂಚಗಾರ್ ವಾದಿರಾಜ ಮಠದ ಶ್ರೀ ಸೀತಾರಾಮಚಂದ್ರ ದೇವರಿಗೆ ಪೂಜೆ ಸಲ್ಲಿಸಿ ಯಾತ್ರೆ ಪ್ರಾರಂಭಿಸಿದ ಇವರು ಬರಿಗಾಲಿನಲ್ಲಿ 300 ಕಿಲೋಮೀಟರ್ ದೂರವನ್ನು ಆರು ದಿನಗಳಲ್ಲಿ ಕ್ರಮಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪುವರು. ಬರುವ ರವಿವಾರ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ಶ್ರೀ ದೇವಳಕ್ಕೆ ಪ್ರದಕ್ಷಿಣೆ ಹಾಕಿದ ಬಳಿಕ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಯಾತ್ರೆ ಪೂರ್ಣಗೊಳಿಸುವರು.
ರಮೇಶ್ ನಾಯ್ಕ್ ಹಾಗೂ ಮಿತ್ರರು ಸೇರಿ ಪ್ರಥಮವಾಗಿ 1999 ರಲ್ಲಿ ಪಾದಯಾತ್ರೆ ಕೈಗೊಂಡಿದ್ದರು. ಅಂದಿನಿಂದ ಇಂದಿನ ವರೆಗೂ ಪ್ರತಿ ವರ್ಷವೂ ಒಮ್ಮೆ ಪಾದಯಾತ್ರೆ ಕೈಗೊಳ್ಳುವ ರೂಢಿ ಇಟ್ಟುಕೊಂಡಿದ್ದು, ಇವತ್ತಿನದು 27 ನೇ ಪಾದಯಾತ್ರೆ ಆಗಿದೆ. ಪಾದಯಾತ್ರೆ ಸಮಯದಲ್ಲಿ ಬೆಳಿಗ್ಗಿನ ಜಾವ 4 ಗಂಟೆಯಿಂದ 10 ಗಂಟೆಯ ತನಕ ನಡೆದು, ಉರಿ ಬಿಸಿಲಿನಲ್ಲಿ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಪುನಃ ಮದ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯ ತನಕ ನಡೆದು, ಬಳಿಕ ಹತ್ತಿರದ ದೇವಾಲಯಗಳಲ್ಲಿ ಮಲಗಿ ನಿದ್ರಿಸುತ್ತಾರೆ. ಮಾರ್ಗ ಮದ್ಯ ಸಿಗುವ ಹಳ್ಳ ಹೊಳೆಗಳಲ್ಲಿ ಸ್ನಾನ ಪೂರೈಸುತ್ತಾರೆ. ದೇವಸ್ಥಾನ ಹಾಗೂ ಉಪಹಾರ ಗೃಹಗಳಲ್ಲಿ ತಿಂಡಿ ತಿನಿಸು ತಿಂದು ಊಟ ಮಾಡುತ್ತಾರೆ. ಯಾತ್ರಾರ್ಥಿಗಳಿಗೆ ಅನ್ನದಾನ ಮಾಡುವುದು ಮಂಜುನಾಥನ ಸೇವೆಯಲ್ಲೊಂದು ಎಂಬ ಭಾವನೆಯಿಂದ ಕೆಲವು ಊರುಗಳಲ್ಲಿ ಇವರಿಗೆ ಉಟೋಪಚಾರ ನೀಡುವ ಸಹೃದಯಿಗಳು ಇದ್ದಾರೆ. ಹಾಗಾಗಿ ಇವರ ಪಾದಯಾತ್ರೆ 27 ವರ್ಷಗಳಿಂದ ಭಕ್ತಿಪೂರ್ವಕವಾಗಿ ನಡೆಯುತ್ತಾ ಬಂದಿದೆ.

ವರದಿ: ನರಸಿಂಹ ನಾಯ್ಕ್ ಹರಡಸೆ.

More Stories
ಅಗ್ನಿವೀರ್ ಹುದ್ದೆಗೆ ಆಯ್ಕೆಯಾದ ನಗರೆಯ ಯುವಕ ವಿನಯ ನಾಯ್ಕಗೆ ಗೌರವ ಪೂರ್ವಕ ಸನ್ಮಾನ
ಜೂನ್ 27ಕ್ಕೆ ತಬಲಾ ಮಾಂತ್ರಿಕ ಕಲ್ಭಾಗ ಗೋಪಾಲಕೃಷ್ಣ ಹೆಗಡೆ ಷಷ್ಠಬ್ಧಿ ಅಭಿನಂದನೆ, ಪುಸ್ತಕ ಬಿಡುಗಡೆ
ಸರ್ಕಾರಿ ಶಾಲೆಗಳ ಬೆಳವಣಿಗೆಗೆ ದಾನಿಗಳ ಸಹಕಾರ ಅಗತ್ಯ; ಬಿಇಒ ಜಯಶ್ರೀ ನಾಯ್ಕ