March 2, 2026

ಭಟ್ಕಳದ ಸುಪ್ರಸಿದ್ಧ ಐತಿಹಾಸಿಕ ಸೋಡಿಗದ್ದೆ ಶ್ರೀ ಮಹಾಸತಿ ದೇವಿ ಜಾತ್ರೆಗೆ ಆರಂಭ

ಭಟ್ಕಳ: ಕರಾವಳಿ ಜಿಲ್ಲೆಯ ಅತಿ ದೊಡ್ಡ ಹಾಗೂ ಖ್ಯಾತ ಜಾತ್ರೆಗಳಲ್ಲಿ ಒಂದಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿ ದೇವಸ್ಥಾನದ ವಾರ್ಷಿಕ ಜಾತ್ರೆ ಶುಕ್ರವಾರ ಭಕ್ತಿಭಾವದಿಂದ ಆರಂಭಗೊಂಡಿದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಜಾತ್ರೆ, ಹಾಲಹಬ್ಬದ ಸೇವೆಯೊಂದಿಗೆ ಅದ್ದೂರಿಯಾಗಿ ಚಾಲನೆ ಪಡೆದಿತು.


ಮಹಾಸತಿ ದೇವಿಗೆ ಪ್ರಥಮ ಪೂಜೆ ಸಲ್ಲಿಸಿದ ಬಳಿಕ ಭಕ್ತರಿಗೆ ದರ್ಶನ–ಪೂಜೆಗೆ ಅವಕಾಶ ಕಲ್ಪಿಸಲಾಯಿತು. ಸ್ಥಳೀಯರೊಂದಿಗೆ ನೆರೆಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡರು. ಜಾತ್ರೆಯ ಮೊದಲ ದಿನ ಮಧ್ಯಾಹ್ನ ದೇವಸ್ಥಾನ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಸಾವಿರಾರು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು.


ಜಾತ್ರೆಯ ಅಂಗವಾಗಿ ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕೆಂಡಸೇವೆ ನಡೆಯಲಿದ್ದು, ಭಕ್ತರು ತಮ್ಮ ಹರಕೆಗಳನ್ನು ಸಲ್ಲಿಸಿ ಮಹಾಸತಿ ದೇವಿಯ ಕೃಪೆಗೆ ಪಾತ್ರರಾಗಲಿದ್ದಾರೆ. ತುಲಾಭಾರ ಸೇವೆಯೂ ಜಾತ್ರೆಯ ವಿಶೇಷ ಆಕರ್ಷಣೆಯಾಗಿದ್ದು, ಜಾತ್ರೆ ಜನವರಿ 31ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಈ ಸಂದರ್ಭದಲ್ಲಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವಿದಾಸ ಮೊಗೇರ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಜಾತ್ರೆಯ ಶಾಂತಿ ಮತ್ತು ಸುವ್ಯವಸ್ಥೆಗೆ ದೇವಸ್ಥಾನ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

About The Author

error: Content is protected !!