ಭಟ್ಕಳ: ಮಹಾಶಿವರಾತ್ರಿ ಅಂಗವಾಗಿ ಪ್ರಸಿದ್ಧ ಶಿವಕ್ಷೇತ್ರವಾದ ಮುರ್ಡೇಶ್ವರ ದೇವಸ್ಥಾನಕ್ಕೆ 16ನೇ ವರ್ಷದ ಪಾದಯಾತ್ರೆ ಫೆ.15ರ ಭಾನುವಾರ ಬೆಳಗಿನ ಜಾವ 4 ಗಂಟೆಗೆ ನಗರದ ಚೋಳೇಶ್ವರ ದೇವಸ್ಥಾನದಿಂದ ಆರಂಭಗೊಳ್ಳಲಿದೆ ಎಂದು ರಂಜನ್ ಇಂಡೇನ್ ಏಜೆನ್ಸಿಯ ಮಾಲಕಿ ಶಿವಾನಿ ಶಾಂತಾರಾಮ ತಿಳಿಸಿದ್ದಾರೆ.
ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಮಹಾಶಿವರಾತ್ರಿ ದಿನದಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಯ ನೆಲೆಯಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಆರಂಭದಲ್ಲಿ ಕೆಲವೇ ಭಕ್ತರಿಂದ ಆರಂಭವಾದ ಈ ಯಾತ್ರೆ, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದ್ದು, ಇದೀಗ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಈ ಬಾರಿ ಬೈಂದೂರು, ಶಿರೂರು, ಹೊನ್ನಾವರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಪಾದಯಾತ್ರೆ ಸಂದರ್ಭದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಹಕಾರ ನೀಡಲಿವೆ. ಕ್ರಿಯಾಶೀಲ ಗೆಳೆಯರ ಬಳಗದ ವತಿಯಿಂದ ಲಿಂಬು ಪಾನಕ ವಿತರಣೆ ನಡೆಯಲಿದೆ.
ಪಾದಯಾತ್ರೆಯಲ್ಲಿ ಭಾಗವಹಿಸುವ ಭಕ್ತರಿಗೆ ಹಣ್ಣು, ನೀರು ಹಾಗೂ ಡೈಪುಟ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಮುರ್ಡೇಶ್ವರದಲ್ಲಿ ಶಿವನ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ದೇವಸ್ಥಾನದ ವತಿಯಿಂದ ಉಪಹಾರ ವಿತರಿಸಲಾಗುತ್ತದೆ. ಮಹಿಳೆಯರು ಹಾಗೂ ಮಕ್ಕಳ ಹೆಚ್ಚಿನ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು, ವಾಪಸ್ಸು ಪ್ರಯಾಣಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ಬಸ್ ಪ್ರಯಾಣಕ್ಕಾಗಿ ಆಧಾರ್ ಕಾರ್ಡ್ ತರಬೇಕೆಂದು ಮನವಿ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಪಾದಯಾತ್ರೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಶಿವಾನಿ ಶಾಂತಾರಾಮ ತಿಳಿಸಿದರು.
ಈ ಸಂದರ್ಭದಲ್ಲಿ ಶಾಂತಾರಾಮ ಭಟ್ಕಳ, ಕುಮಾರ ನಾಯ್ಕ, ಕಿರಣ ಚಂದಾವರಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

More Stories
ಎಐಟಿಎಂನಲ್ಲಿ ವಿಟಿಯು ಅಂತರ ಕಾಲೇಜು ಫುಟ್ಬಾಲ್ ಪಂದ್ಯಾವಳಿ ಚಾಲನೆ
ತೇಜಸ್ವಿ ನಾಯ್ಕರಿಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ
ಬೈಲೂರಿನಲ್ಲಿ ಭಗವದ್ಗೀತೆಯ 3ನೇ ಅಧ್ಯಾಯ ಸಮರ್ಪಣೆ, ಮಾತೃವಂದನೆ ಕಾರ್ಯಕ್ರಮ ಯಶಸ್ವಿ