ಭಟ್ಕಳ: ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಕಾರೊಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಗರ್ಭಿಣಿ ಮಹಿಳೆ ಸೇರಿ ಆರು ಮಂದಿ ಗಾಯಗೊಂಡ ಘಟನೆ ನಗರದ ಮಣ್ಣಕುಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ರಾಘವೇಂದ್ರ ಮಠದ ಹತ್ತಿರ ಈ ಅಪಘಾತ ಸಂಭವಿಸಿದೆ.

ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದ ಅಪರಿಚಿತ ಕಾರು ಚಾಲಕನು, ಮುಟ್ಟಳ್ಳಿ ಬೈಪಾಸ್ ಕಡೆಯಿಂದ ಭಟ್ಕಳದತ್ತ ಸಾಗುತ್ತಿದ್ದ ಆಟೋರಿಕ್ಷಾವನ್ನು ಓವರ್‌ಟೇಕ್ ಮಾಡಲು ಯತ್ನಿಸಿದ ವೇಳೆ ಕಾರಿನ ಎಡಭಾಗದಿಂದ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಉಜ್ಜಿಕೊಂಡು ಪರಾರಿಯಾಗಿದ್ದಾನೆ. ಡಿಕ್ಕಿಯ ತೀವ್ರತೆಗೆ ರಿಕ್ಷಾ ರಸ್ತೆ ಮೇಲೆಯೇ ಪಲ್ಟಿಯಾಗಿದೆ.
ಅಪಘಾತದಲ್ಲಿ ರಿಕ್ಷಾ ಚಾಲಕ ನಾಗರಾಜ ಬಿಳಿಯಾ ದೇವಾಡಿಗ ಅವರಿಗೆ ಎರಡೂ ಕಾಲುಗಳಿಗೆ ಭಾರೀ ರಕ್ತಗಾಯ, ಹಣೆಗೆ ಗಾಯ, ಕುತ್ತಿಗೆಗೆ ಒಳನೋವು ಸೇರಿದಂತೆ ಮೈಗೈಗಳಲ್ಲಿ ಗಾಯಗಳಾಗಿವೆ. ದೇವಿದಾಸ ಸುಬ್ರಾಯ ದೇವಾಡಿಗ ಅವರಿಗೆ ತಲೆಗೆ ರಕ್ತಗಾಯ, ಎಡ ಕಿವಿ ಹಾಗೂ ಬಲ ಭುಜಕ್ಕೆ ಭಾರೀ ಗಾಯಗಳಾಗಿವೆ.
ಲಕ್ಷ್ಮಿ ತಿಮ್ಮಪ್ಪ ಮೋಗೇರ ಅವರಿಗೆ ಬಲಕೈ ಭುಜ, ಮೋಣಕೈ ಹಾಗೂ ಬಲಗಾಲಿಗೆ ಗಾಯಗಳಾಗಿವೆ. ಹೇಮಾವತಿ ಕೋಂ ದಿನೇಶ ಮೋಗೇರ ಅವರಿಗೆ ಬಲಕೈಗೆ ಭಾರೀ ಗಾಯವಾಗಿದೆ. ಶ್ರುತಿ ರಾಮ ಮೋಗೇರ ಅವರಿಗೆ ತಲೆಗೆ ಹಾಗೂ ಮೈಗೆ ಒಳನೋವು ಉಂಟಾಗಿದೆ. ರಂಜಿತಾ ಸಂತೋಷ ಮೋಗೇರ ಗರ್ಭಿಣಿಯಾಗಿದ್ದು, ಸೋಂಟಿಗೆ ಒಳನೋವು ಕಾಣಿಸಿಕೊಂಡಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಾಯಾಳುಗಳ ಚಿಕಿತ್ಸೆಯಲ್ಲಿ ನಿರತರಾಗಿದ್ದರಿಂದ ದೂರು ನೀಡಲು ವಿಳಂಬವಾಗಿದೆ ಎಂದು ಮುಂಡಳ್ಳಿಯ ಜೋಗಿಮನೆಯ ಮಹೇಶ ತಂದೆ ಮಾದೇವ ದೇವಾಡಿಗ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಕಾರು ಚಾಲಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

More Stories
ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ. 100 ಕ್ಕೆ 100 ಫಲಿತಾಂಶ; ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ
ವಿದೇಶಿ ಉದ್ಯೋಗದ ಆಮಿಷ ಒಡ್ಡಿ ಯುವಕನಿಗೆ ₹2.49 ಲಕ್ಷ ವಂಚನೆ: ಮೂವರ ವಿರುದ್ಧ ಪ್ರಕರಣ ದಾಖಲು!
ಅಪಘಾತ ಸ್ಥಳಕ್ಕೆ ಎಸ್ಪಿ ಭೇಟಿ; ತುರ್ತು ಸುರಕ್ಷತಾ ಕ್ರಮಕ್ಕೆ ಖಡಕ್ ಸೂಚನೆ