ಭಟ್ಕಳ: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಮಾರ್ಚ್ 5ರಿಂದ 8ರವರೆಗೆ ನಡೆದ ಖೇಲೋ ಇಂಡಿಯಾ ಅಸ್ಮಿತಾ ಕಿಕ್‌ಬಾಕ್ಸಿಂಗ್ ಲೀಗ್ (ಸೌತ್ ಝೋನ್) ಸ್ಪರ್ಧೆಯಲ್ಲಿ ಭಟ್ಕಳದ ನಾಗಶ್ರೀ ಮಾರ್ಷಲ್ ಆರ್ಟ್ಸ್ ಮಹಿಳಾ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದು, ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಗಳಿಸಿದ್ದಾರೆ.

ಸ್ಪರ್ಧೆಯಲ್ಲಿ ಕೇರಳ, ತಮಿಳುನಾಡು, ಒಡಿಶಾ, ಪಾಂಡಿಚೇರಿ, ಅಂಡಮಾನ್–ನಿಕೋಬಾರ್, ಲಕ್ಷದ್ವೀಪ, ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಮಹಿಳಾ ಕಿಕ್‌ಬಾಕ್ಸರ್‌ಗಳು ಭಾಗವಹಿಸಿದ್ದರು. ಮಹಿಳಾ ಕ್ರೀಡೆಗಳನ್ನು ಉತ್ತೇಜಿಸುವುದು ಮತ್ತು ಯುವ ಕ್ರೀಡಾಪಟುಗಳಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಅಸ್ಮಿತಾ ಉಪಕ್ರಮದಡಿ ಈ ಪಂದ್ಯಾವಳಿ ಆಯೋಜಿಸಲಾಗಿತ್ತು.
ಜೂನಿಯರ್ ವಿಭಾಗದ (-45 ಕೆಜಿ) ಪಾಯಿಂಟ್ ಫೈಟ್‌ನಲ್ಲಿ ಲಿಖಿತಾ ಶಂಕರ ನಾಯ್ಕ ಚಿನ್ನದ ಪದಕ ಪಡೆದರೆ, ಸೀನಿಯರ್ ವಿಭಾಗದ (-45 ಕೆಜಿ) ಪಾಯಿಂಟ್ ಫೈಟ್‌ನಲ್ಲಿ ಅಖೀಲಾ ಚಂದ್ರಕಾಂತ್ ನಾಯ್ಕ ಬೆಳ್ಳಿಯ ಪದಕ ಪಡೆದಿದ್ದಾರೆ. ಸಬ್ ಜೂನಿಯರ್ ವಿಭಾಗದ (-37 ಕೆಜಿ) ಲೈಟ್ ಕಾಂಟ್ಯಾಕ್ಟ್‌ನಲ್ಲಿ ಸಮೀಕ್ಷಾ ಮಾಸ್ತಿ ಗೊಂಡ ಹಾಗೂ ಜೂನಿಯರ್ ವಿಭಾಗದ (-42 ಕೆಜಿ) ಲೈಟ್ ಕಾಂಟ್ಯಾಕ್ಟ್‌ನಲ್ಲಿ ಮನಾಲಿ ರಾಜು ನಾಯ್ಕ ಕಂಚಿನ ಪದಕ ಗಳಿಸಿದ್ದಾರೆ.


ಇದೇ ವೇಳೆ ಸಬ್ ಜೂನಿಯರ್ ವಿಭಾಗದ (-42 ಕೆಜಿ) ಪಾಯಿಂಟ್ ಫೈಟ್‌ನಲ್ಲಿ ಆಶಿತಾ ಉದಯ ನಾಯ್ಕ ಐದನೇ ಸ್ಥಾನ ಪಡೆದಿದ್ದು, ಪಾಯಿಂಟ್ ಫೈಟ್ ತಂಡ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪದಕ ವಿಜೇತರು ಚೆನ್ನೈನಲ್ಲಿ ನಡೆಯಲಿರುವ ರಾಷ್ಟ್ರೀಯ ಕಿಕ್‌ಬಾಕ್ಸಿಂಗ್ ಲೀಗ್‌ಗೆ ಅರ್ಹತೆ ಪಡೆದಿದ್ದಾರೆ.
ಸ್ಪರ್ಧೆಯಲ್ಲಿ ನಾಗಶ್ರೀ ನಾಯ್ಕ ರೆಫರಿಯಾಗಿ ಕಾರ್ಯನಿರ್ವಹಿಸಿದರು. ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಉತ್ತರ ಕನ್ನಡ ಜಿಲ್ಲಾ ಕಿಕ್‌ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಈಶ್ವರ ನಾಯ್ಕ, ತರಬೇತುದಾರ ನಾಗಶ್ರೀ ನಾಯ್ಕ, ಕಾನೂನು ಸಲಹೆಗಾರ ಮನೋಜ್ ನಾಯ್ಕ, ಉಮೇಶ್ ಮೊಗೇರ್ ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

More Stories
ನಿವೃತ್ತ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ
ನಗರ ಹಿಂದೂ ಸಂಗಮ ಯಶಸ್ಸಿಗೆಸಹಕರಿಸಿದ ಪೊಲೀಸರಿಗೆ ಧನ್ಯವಾದ
ಮಾರ್ಚ್ 14ರಂದು ಭಟ್ಕಳದಲ್ಲಿ ಮೊದಲ ಲೋಕ್ ಅದಾಲತ್