

ಭಟ್ಕಳ : ಶಿಕ್ಷಣ ಕ್ಷೇತ್ರದಲ್ಲಿ ‘ಕೆ ವಿ ಭಟ್ಟರು’ ಎಂದು ಪ್ರಸಿದ್ಧರಾದ, ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮಗಳಲ್ಲಿ 40 ವರ್ಷ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಕೃಷ್ಣಾನಂದ ಭಟ್ಟ ಹಾಗೂ ಅವರ ಪತ್ನಿ, ‘ಜನಪ್ರಿಯ ಶಿಕ್ಷಕಿ’ ಪ್ರಶಸ್ತಿ ಪುರಸ್ಕೃತೆ ಜಯಶ್ರೀ (ಗೌರಿ) ಅವರಿಗೆ ಶಿಷ್ಯವರ್ಗ, ಅಭಿಮಾನಿಗಳು, ಸಹೋದ್ಯೋಗಿಗಳು ಹಾಗೂ ಬಂಧುವರ್ಗದ ವತಿಯಿಂದ ಅಭಿನಂದನಾ ಸಮಾರಂಭ ಮಾ.22ರಂದು ನಡೆಯಲಿದೆ.

ಶಿಕ್ಷಕ ದಂಪತಿ ಎಂಭತ್ತೆರಡರ ಹರೆಯಕ್ಕೆ ಅಡಿಯಿಡುವ ಹಾಗೂ ವೈವಾಹಿಕ ಜೀವನದ ಸುವರ್ಣಮಹೋತ್ಸವ ಸಂದರ್ಭದಲ್ಲಿ ಕುಮಟಾ ತಾಲೂಕು ಬೆತ್ತಗೇರಿ ಸಮೀಪ ಹೊಳೆಗದ್ದೆಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಸಭಾಭವನದಲ್ಲಿ ಸಮಾರಂಭ ನಡೆಯಲಿದ್ದು, ಬೆಳಗ್ಗೆ ಆರಂಭಗೊಂಡು ರಾತ್ರಿಯ ಭೋಜನದೊಂದಿಗೆ ಮುಕ್ತಾಯಗೊಳ್ಳುವ ಕಾರ್ಯಕ್ರಮದಲ್ಲಿ ಅಭಿನಂದನ ಗ್ರಂಥ ಬಿಡುಗಡೆ, ಗುರುದಂಪತಿಗೆ, ಸಾಧಕರಿಗೆ ಸನ್ಮಾನ, ವಿಚಾರಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ.

ಸಾಂಸಾರಿಕ ಕಾರಣಗಳಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಕೃಷ್ಣಾನಂದ ಭಟ್ಟರು ಆದರ್ಶ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಗುರುವಾಗಿ ವಿದ್ಯಾದಾನ ಮಾಡಿದ್ದು, ಅವರ ವಿದ್ಯಾರ್ಥಿಗಳು ದೇಶದ ಉದ್ದಗಲದಲ್ಲಲ್ಲದೆ, ವಿದೇಶಗಳಲ್ಲೂ ನೆಲೆಸಿ ಆದರ್ಶ ಜೀವನ ನಡೆಸುತ್ತಿದ್ದಾರೆ. ಜಯಶ್ರೀ ಅವರು ಶಿಕ್ಷಕಿಯಾಗಿ ಬೋಧನಾ ತತ್ಪರತೆಯಿಂದಾಗಿ ಶಿಕ್ಷಣ ಇಲಾಖೆಯ ಜನಪ್ರಿಯ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಿವೃತ್ತಿ ಬಳಿಕ ಭಟ್ಟರು ಶ್ರೀರಾಮಚಂದ್ರಪುರ ಮಠದಲ್ಲಿ ಪ್ರಧಾನ ಗುರಿಕಾರರಾಗಿ, ಸಾಮಾಜಿಕ, ಧಾರ್ಮಿಕ ಹಾಗೂ ಸಾಹಿತ್ಯಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಗೋಮಾತೆಯ ಸಾರ್ಥಕ ಜೀವನವನ್ನು ಬಣ್ಣಿಸುವ ಕವಿತೆಗಳನ್ನು ರಚಿಸಿ, ಅವುಗಳನ್ನೊಳಗೊಂಡ ಧ್ವನಿಸುರುಳಿ ‘ಶ್ರೀಗೋಭಕ್ತಿ ಸುಧೆ’ಯನ್ನು ಸನಾತನ ಲೋಕಕ್ಕೆ ಅರ್ಪಿಸಿದ್ದಾರೆ. ಜಯಶ್ರೀ ಅವರು ಶ್ರೀಮಠದಲ್ಲಿ ‘ಮಾತೃಪ್ರಧಾನೆ’ಯಾಗಿ ಸೇವಾನಿರತರಾಗಿದ್ದು, ದಂಪತಿಯು ಶ್ರೀಗಳಿಂದ ‘ಶ್ರೀಗುರು ಸೇವಾತಿಲಕ’ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


About The Author




More Stories
ತೆರೆದ ಚರಂಡಿ ಹೊಂಡ: ಅಪಾಯದ ನಡುವೆ ಭಟ್ಕಳದ ವಾಹನ ಸವಾರರ ಸಂಚಾರ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಮಂಕಾಳ್ ಎಸ್. ವೈದ್ಯ ಆಯ್ಕೆ: ಮಾಜಿ ಸಚಿವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ.
ಆಗಸ್ಟ್ 18ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ: ಡಾ. ಸುರೇಶ ನಾಯಕ್ ಸ್ಮರಣಾರ್ಥ ಆಯೋಜನೆ