March 29, 2026

ಅಂತ್ಯಕ್ರಿಯೆಗೂ ಕಟ್ಟಿಗೆ ಅಭಾವ, ಸಭೆಯಲ್ಲಿ ಸಮಸ್ಯೆ ಬಗೆಹರಿಸುವ ಅಧಿಕಾರಿಗಳ ಭರವಸೆಯು ಹುಸಿಯಾಯ್ತು

ಹೊನ್ನಾವರ: ಪಟ್ಟಣ ವ್ಯಾಪ್ತಿಯಲ್ಲಿರುವ ಶವಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ಕಟ್ಟಿಗೆ ಅಭಾವ ಇದ್ದು, ಗ್ರಾಮೀಣ ಭಾಗದಿಂದ ಪಡೆಯುವ ಸ್ಥಿತಿ ಎದುರಾಗಿರುವುದು ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಪಟ್ಟಣ ವ್ಯಾಪ್ತಿಯಲ್ಲಿ 20 ವಾರ್ಡ್ ಗಳಿದ್ದು, ಅಂತ್ಯಕ್ರಿಯೆಗೆ ಪಟ್ಟಣದಲ್ಲಿ ಶವಗಾರಗಳಿವೆ. ಈ ಶವಗಾರಗಳಿಗೆ ಹೊನ್ನಾವರ ಅರಣ್ಯ ಇಲಾಖೆಯ ವತಿಯಿಂದ ಕಟ್ಟಿಗೆ ಪೂರೈಕೆ ಮಾಡಲಾಗುತ್ತಿತ್ತು. ಕಳೆದ ಕೆಲ ದಿನಗಳಿಂದ ಇಲ್ಲಿ ಕಟ್ಟಿಗೆ ಅಭಾವ ಇದ್ದು, ಹಳದೀಪುರ ಅಥವಾ ಕಾಸರಕೋಡ ಭಾಗದಿಂದ ಕಟ್ಟಿಗೆ ತರುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯ ಪ್ರದೇಶದಲ್ಲಿ ಸಾರ್ವಜನಿಕರು ನೆರವಾಗಿ ಕಟ್ಟಿಗೆ ತರುವುದಕ್ಕೆ ಅಡ್ಡಿ ಪಡಿಸುವ ಅಧಿಕಾರಿಗಳು, ತಮ್ಮ ಇಲಾಖೆಗೆ ಆರ್ಥಿಕವಾಗಿ ನೆರವು ನೀಡುತ್ತಿದ್ದರೂ, ಕಟ್ಟಿಗೆ ಸಂಗ್ರಹದಲ್ಲಿ ನಿಲಕ್ಷ್ಯ ವಹಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಡುತ್ತಿದೆ.
ಗಲ್ಪ ದೇಶದಲ್ಲಿ ಯುದ್ದಗಳು ನಡೆಯುತ್ತಿರುವುದು ಗ್ಯಾಸ್ ಸಿಲೆಂಡರ್ ಅಭಾವದಿಂದ ಹಲವು ಹೊಟೇಲಗಳಲ್ಲಿ ಕಟ್ಟಿಗೆ ಬಳಸಲು ಆರಂಭಿಸಿರುದರಿಂದ, ಕಟ್ಟಿಗೆ ಬೇಡಿಕೆ ಇದ್ದರೂ ಅಧಿಕಾರಿಗಳು ಕೊರತೆ ನಿಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಕೆಲವೇ ತಿಂಗಳಿನಲ್ಲಿ ಮುಂಗಾರು ಮಳೆ ಆರಂಭವಾಗುವುದರಿಂದ ಮುಂಗಾರು ಪೂರ್ವ ಸಿದ್ದತೆಗಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಮನೆ ಬಳಕೆಗೂ ಕಟ್ಟಿಗೆ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಈ ಸಮಯದಲ್ಲಿ ಸಂಗ್ರಹಣಾ ಸ್ಥಳದಲ್ಲಿ ಕಟ್ಟಿಗೆ ಇಲ್ಲದೇ ಇರುದರಿಂದ ಮೇಲಾಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಜನಪ್ರತಿನಿಧಿಗಳು ಈ ಬಗ್ಗೆ ವಿಶೇಷ ಗಮನಹರಿಸಿ ಸಾರ್ವಜನಿಕರಿಗೆ ಉಂಟಾಗುವ ಸಮಸ್ಯೆ ಬಗೆಹರಿಸುವತ್ತ ಮುಂದಾಗಬೇಕಿದೆ.


ಕೆಲ ದಿನದ ಹಿಂದೆ ಅಧಿಕಾರಿಗಳ ಜನಸ್ಪಂದನಾ ಕಾರ್ಯಕ್ರಮದಲ್ಲಿ ಈ ವಿಷಯದ ಬಗ್ಗೆ ಸಭೆಯ ಗಮನಕ್ಕೆ ತಂದಾಗ ಸಂಭದಿಸಿದ ಇಲಾಖೆಯ ಅಧಿಕಾರಿಗಳು ಗೈರಾಗಿದ್ದರು. ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಪ್ರವೀಣ ಕರಾಂಡೆ ಇವರು ಸಮಸ್ಯೆಯನ್ನು ಕೂಡಲೇ ಬಗೆಹರಿಸುವ ಭರವಸೆ ನೀಡಿದ್ದರು. ಸಭೆ ನಡೆದು ವಾರ ಕಳೆಯುತ್ತಾ ಬಂದರೂ ಅಧಿಕಾರಿಗಳಿಂದ ಸಮಸ್ಯೆಗೆ ಸ್ಪಂದನೆ ದೊರೆಯದೇ ಇರುವುದರಿಂದ ಕಛೇರಿ ಮುಂದೆ ಧರಣೆ ನಡೆಸಲು ಸಾರ್ವಜನಿಕರು ಮುಂದಾಗುತ್ತಿದ್ದಾರೆ. ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಮೂಲಕ ಸಮಸ್ಯೆ ಬಗೆಹರಿಸುವತ್ತ ಅಧಿಕಾರಿಗಳು ಜನಪ್ರತಿನಿಧಿಗಳು ಮುಂದಾಗಬೇಕಿದೆ.


……….
ತಾಲೂಕಿನ ಗ್ರಾಮೀಣ ಭಾಗದಲ್ಲಿ ರಸ್ತೆ ಅಂಚಿಗೆ ನೂರಾರು ಮರಗಳು ಅಪಾಯ ಸ್ಥಿತಿಯಲ್ಲಿದೆ. ಇಂತಹ ಮರಗಳನ್ನು ಕಡಿಯುವಂತೆ ಉಸ್ತುವಾರಿ ಸಚಿವರು ಹೇಳಿ ಎರಡು ವರ್ಷ ಕಳೆಯುತ್ತಾ ಬಂದರೂ, ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ‌. ಮುಂದಿನ ದಿನದಲ್ಲಿ ಮತ್ತೊಮ್ಮೆ ಆದೇಶವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಬೇಕು.
ಸುಬ್ರಹ್ಮಣ್ಯ ನಾಯ್ಕ ಗ್ರಾಮೀಣ ಭಾಗದ ನಿವಾಸಿ

………
ಜನಸ್ಪಂದನಾ ಸಭೆಯಲ್ಲಿ ತಿಳಿಸಿದರೂ, ಅಧಿಕಾರಿಗಳು ಈ ಬಗ್ಗೆ ಗಮನಹರಿಸಿಲ್ಲ. ಮುಂದೆಯೂ ಸಮಸ್ಯೆ ಮುಂದುವರೆದಲ್ಲಿ ಶವ ಸಾಗಿಸುವ ನನ್ನ ವಾಹನದಲ್ಲಿ ಮೃತದೇಹವನ್ನು ಇಟ್ಟುಕೊಂಡು ಇಲಾಖೆಯ ಎದುರಗಡೆ ಇಟ್ಟು ಪ್ರತಿಭಟನೆ ಮಾಡುತ್ತೇವೆ.
ಶ್ರೀರಾಮ ಜಾದುಗಾರ ಸಾಮಾಜಿಕ ಹೋರಾಟಗಾರರು.
…………..

ಹೊನ್ನಾವರ ಪಟ್ಟಣದಲ್ಲಿರುವ ಪ್ರದೇಶದಲ್ಲಿ ಪ್ರಸುತ್ತ ಕಟ್ಟಿಗೆ ಇಲ್ಲದಿದ್ದರೂ, ಸಮೀಪದ ಹಳದೀಪುರ, ಕಡತೋಕಾದಲ್ಲಿ ಲಭ್ಯವಿದೆ. ಕೆಲವೇ ದಿನದಲ್ಲಿ ಪಟ್ಟಣದಲ್ಲಿಯ ಸಮಸ್ಯೆ ಬಗೆಹರಿಸಲಾಗುವುದು.
ಸವಿತಾ ದೇವಾಡಿಗ ಆರ್.ಎಫ್.ಓ ಹೊನ್ನಾವರ

About The Author

error: Content is protected !!