March 29, 2026

ಜನಸ್ಪಂದನೆಗೆ ಆದ್ಯತೆ: ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ – ಸಚಿವ ಮಂಕಾಳ ವೈದ್ಯ


ಭಟ್ಕಳ: ಜನಸಾಮಾನ್ಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು ನನ್ನ ಮೊದಲ ಆದ್ಯತೆ. ಆಸ್ಪತ್ರೆ, ಶಾಲೆ, ಶ್ಮಶಾನ ಸೇರಿದಂತೆ ಸಾರ್ವಜನಿಕರ ಅಹವಾಲುಗಳಿಗೆ ನೇರ ಪರಿಹಾರ ಒದಗಿಸುವ ಉದ್ದೇಶದಿಂದಲೇ ಜನಸ್ಪಂದನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಸಚಿವ ಮಂಕಾಳ ವೈದ್ಯರು ಹೇಳಿದರು.
ಪಟ್ಟಣದ ಸಚಿವರ ಕಚೇರಿಯಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ನಾಗರಿಕರು ತಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಸಚಿವರ ಮುಂದಿಟ್ಟರು.

ತಾಲೂಕಿನ ಹಡೀಲು ಗ್ರಾಮದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಚಂದ್ರಶಾಲೆ ಸುತ್ತಲಿನ ಪ್ರಾಕಾರ ಹಾಗೂ ಗೋಡೆಯ ಜೀರ್ಣೋದ್ಧಾರಕ್ಕೆ ನೆರವು ನೀಡುವಂತೆ ಮನವಿ ಮಾಡಲಾಯಿತು. ಬೆಳಕೆ ಪಂಚಾಯಿತಿ ವ್ಯಾಪ್ತಿಯ ಕಗ್ಗುಂಡಿ ಗ್ರಾಮದ ಹೊನ್ನಮ್ಮ ಮಜಿರೆಯ ಹೊಳೆಗೆ ಕಾಲುಸಂಕ ನಿರ್ಮಾಣ, ಹಡಾಳ ಗ್ರಾಮದ ಅಂಗನವಾಡಿ ಕಟ್ಟಡ ನಿರ್ಮಾಣ, ಬೈಲೂರು ಗ್ರಾಮದ ತೆಂಗಾರ ವಾರ್ಡಿನ ಸರಸ್ವತಿ ಹೊಳೆಯ ಲಕ್ಷ್ಮೀ ನಾರಾಯಣ ದೇವಸ್ಥಾನದ ಹತ್ತಿರ ಪಾದಚಾರಿ ಸೇತುವೆ ದುರಸ್ತಿ ಹಾಗೂ ಆನಂದ ಪೈ ಅಂಗಡಿ ಹತ್ತಿರ ಹೊಸ ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಯಿತು.

ಇದಲ್ಲದೆ ಪಟ್ಟಣದ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಹೊಸ ಕೊಠಡಿಗಳ ನಿರ್ಮಾಣ, ಕುಡಿಯುವ ನೀರು, ವಿದ್ಯುತ್ ಮತ್ತು ಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಕೊರತೆ ಕುರಿತು ನಾಗರಿಕರು ಸಚಿವರ ಗಮನ ಸೆಳೆದರು.
ಸಾಮಾಜಿಕ ಕಾರ್ಯಕ್ರಮಗಳಾದ ಮದುವೆ, ಮುಂಜಿ ಮುಂತಾದ ಕಾರ್ಯಗಳನ್ನು ನಡೆಸಲು ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಕುಟುಂಬಗಳೂ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಈ ವೇಳೆ ಸಚಿವ ಮಂಕಾಳ ವೈದ್ಯರು ಸಮಸ್ಯೆಗಳನ್ನು ಮನಸಾರೆ ಆಲಿಸಿ, ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲೇ ಧನಸಹಾಯ ವಿತರಿಸಿದರು.

ಜನಸಾಮಾನ್ಯರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿ, ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಅಗತ್ಯ ನಿರ್ದೇಶನಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಪುತ್ರಿ ಬೀನಾ ವೈದ್ಯ ಉಪಸ್ಥಿತರಿದ್ದು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಕಾರ್ಯಕರ್ತರಿಗೆ ಅಗತ್ಯ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಆಪ್ತ ಕಾರ್ಯದರ್ಶಿ ನಾಗೇಂದ್ರ ಮೊಗೇರ, ನಾಗರಾಜ ನಾಯ್ಕ ಸೇರಿದಂತೆ ಪಕ್ಷದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

About The Author

error: Content is protected !!