March 29, 2026

ಭಟ್ಕಳದ ಹಿರಿಯ ಸಮಾಜಸೇವಕ ಸೈಯ್ಯದ್ ಹಸನ್ ಬರ್ಮವರ್ ನಿಧನ


ಭಟ್ಕಳ: ಪಟ್ಟಣದ ಹಿರಿಯ ಮುಖಂಡರು, ಸಮಾಜಸೇವಕ ಹಾಗೂ ಹಲವು ಸಂಘ–ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸೈಯ್ಯದ್ ಹಸನ್ ಬರ್ಮವರ್ (73) ಅವರು ಬುಧವಾರ ಮಧ್ಯಾಹ್ನ ನಿಧನರಾದರು.


ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸೈಯ್ಯದ್ ಹಸನ್ ಬರ್ಮವರ್ ಅವರು ಭಟ್ಕಳ ಪುರಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿ ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದರು. ಜನತಾದಳ ಪಕ್ಷದ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಜನತಾ ಪರಿವಾರದ ಹಿನ್ನೆಲೆಯುಳ್ಳ ಇವರಿಗೆ ಆರ್.ವಿ. ದೇಶಪಾಂಡೆ, ಬಸವರಾಜ ಹೊರಟ್ಟಿ ಸೇರಿದಂತೆ ವಿವಿಧ ರಾಜಕೀಯ ಮುಖಂಡರೊಂದಿಗೆ ಸ್ನೇಹಪೂರ್ಣ ಸಂಬಂಧವಿತ್ತು.


ಸಾಮಾಜಿಕ ಕ್ಷೇತ್ರದಲ್ಲಿ ಅವರು ಇಸ್ಲಾಮಿಕ್ ವೆಲ್ಫೇರ್ ಸೊಸೈಟಿ, ವೆಲ್ಫೇರ್ ಆಸ್ಪತ್ರೆ ಹಾಗೂ ಶಮ್ಸ್ ಸ್ಕೂಲ್ ಸಂಸ್ಥೆಗಳ ಸ್ಥಾಪಕ ಸದಸ್ಯರಾಗಿದ್ದರು. ಜಾಮಿಯಾಬಾದ್‌ನ ನ್ಯೂ ಶಮ್ಸ್ ಶಾಲೆಗೆ ಭೂಮಿ ಒದಗಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು ಎನ್ನಲಾಗಿದೆ. ಜಮಾಅತೆ ಇಸ್ಲಾಮಿ ಹಿಂದ್‌ನ ಸಮಾಜಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು.
ತಮ್ಮ ಜೀವನದ ಬಹುಪಾಲನ್ನು ಸಮಾಜಸೇವೆಗೆ ಮೀಸಲಿಟ್ಟಿದ್ದ ಅವರು ಅನೇಕ ಬಡ ಕುಟುಂಬಗಳಿಗೆ ಮನೆ ನಿರ್ಮಿಸಲು ಸಹಾಯ ಮಾಡಿದ್ದರು. ಸಹಾಯಕ್ಕಾಗಿ ಮನೆಗೆ ಬಂದವರನ್ನು ನಿರಾಶೆಗೊಳಿಸದ ವ್ಯಕ್ತಿಯಾಗಿ ಅವರು ಗುರುತಿಸಿಕೊಂಡಿದ್ದರು.


ಇವರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ., ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯ ಸೈಯ್ಯದ್ ಶಕೀಲ್ ಎಸ್.ಎಂ., ಶಮ್ಸ್ ಸ್ಕೂಲ್‌ನ ನಝೀರ್ ಆಹಮದ್ ಖಾಝಿ, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಭಟ್ಕಳ ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಹಾಗೂ ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಎಂ.ಆರ್. ಮಾನ್ವಿ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

About The Author

error: Content is protected !!