August 24, 2026

ಉತ್ತಮ ಆರೋಗ್ಯ ಸುಸ್ಥಿರ ಸಂಪತ್ತು” ಆರೋಗ್ಯ ಮತ್ತು ಹೂಡಿಕೆ ಜಾಗೃತಿ ಕಾರ್ಯಕ್ರಮ

ಹೊನ್ನಾವರ: ನಮ್ಮ ದೇಹ ಸದೃಡವಾಗಿಡಲು ದೇಹ ದಂಡಿಸಿದರೆ ಮಾತ್ರ ಸಾಲದು, ಹೃದಯ, ಮನಸ್ಸು ನಮ್ಮ ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದು ಖ್ಯಾತ ನ್ಯಾಯವಾದಿ ಅಂಕೋಲದ ನಾಗರಾಜ ನಾಯಕ ಅಭಿಪ್ರಾಯಪಟ್ಟರು.


ಪಟ್ಟಣದ ನಾಮಧಾರಿ ಸಭಾಭವನದಲ್ಲಿ ” ಹೆಲ್ತ್ ಫಸ್ಟ್ ಡಯಾಗ್ನೊಸ್ಟಿಕ್” ಹೊನ್ನಾವರ ಇವರ ಪ್ರಾಯೋಜಕತ್ವದಲ್ಲಿ ಜರುಗಿದ “ಉತ್ತಮ ಆರೋಗ್ಯ ಸುಸ್ಥಿರ ಸಂಪತ್ತು” ಆರೋಗ್ಯ ಮತ್ತು ಹೂಡಿಕೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ನಾವು ಎಷ್ಟು ವರ್ಷ ಬದುಕುತ್ತೇವೆ ಎನ್ನುವುದಕ್ಕಿಂತ ಎಷ್ಟು ಸಮಯ ಆರೋಗ್ಯವಾಗಿ ಬದುಕುತ್ತೇವೆ ಎನ್ನುವುದು ಮುಖ್ಯವಾಗಿದೆ. ನಾವು ಜೀವನದಲ್ಲಿ ಸುಸ್ಥಿರವಾಗಿರಬೇಕೆಂದರೆ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ವೈಭೋಗದ ಜೀವನ ನಡೆಸಲು ಆಲೋಚಿಸುವ ಬದಲು ಇದ್ದಿದ್ದರಲ್ಲೆ ಬದುಕಲು ಕಲಿತು ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಬೇಕು. ಇಂದು ನಾವು ಹಣ ಮಾಡುವ ಹಿಂದೆ ಹೋಗುತ್ತಾ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದು, ಇಲ್ಲಿ ಆರೋಗ್ಯ ರಕ್ಷಣೆಯ ಜೊತೆಗೆ ಹೂಡಿಕೆಯ ಕುರಿತು ಮಾಹಿತಿ ತಿಳಿಸುವ ಕಾರ್ಯವು ಸಾರ್ವಜನಿಕರಿಗೆ ತೀರಾ ಉಪಯುಕ್ತವಾಗಿದೆ ಎಂದರು.


ಗೇರುಸೊಪ್ಪಾ ಮುಖ್ಯಪ್ರಾಣ ದೇವಸ್ಥಾನದ ಅರ್ಚಕರಾದ ಸೂರಾಲು ಚಂದ್ರಶೇಖರ ಭಟ್ಟ ಆರೋಗ್ಯ ಕಾರ್ಡ್ ಬಿಡುಗಡೆಗೊಳಿಸಿ ಮಾತನಾಡಿ ಇಂದು ಅನಾರೊಗ್ಯ ಪಿಡಿತರಾದಾಗ ಆಸ್ಪತ್ರೆಯಲ್ಲಿ ಬಿಲ್ ತುಂಬಲು ಕೈ ಸುಟ್ಟಿಕೊಳ್ಳುತ್ತಿದ್ದು, ಇದಕ್ಕೆ ನೆರವಾಗಲು ಹೆಲ್ತ ಕಾರ್ಡ್ ತೀರಾ ಅಗತ್ಯವಾಗಿದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮತ್ತು ಹೂಡಿಕೆಯನ್ನು ಯೋಚಿಸಿ ಮಾಡಿ ಎಂದು ಸಲಹೆ ನೀಡಿದರು.


ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸೋನಿ ಮಾತನಾಡಿ ನಾವು ಹಣ ಮಾಡುವ ಉದ್ದೇಶದಿಂದ ಹೆಚ್ಚು ಶ್ರಮ ನೀಡುವಾಗ ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದೇವೆ. ಕಷ್ಟಪಟ್ಟರೆ ನಮಗೆ ಯಶಸ್ಸು ಸಿಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕಿನ ನ್ಯಾಯವಾದಿ ವಿಕ್ರಂ ನಾಯ್ಕ ಮಾತನಾಡಿ ಜಿಲ್ಲೆಯಲ್ಲಿ ಮಲ್ಟಿಸ್ಪೇಷಾಲಿಟಿಯಂತಹ ದೊಡ್ಡ ಆಸ್ಪತ್ರೆಗಳಿಲ್ಲ. ಜನರಿಗೆ ಆರೋಗ್ಯದ ಬಗ್ಗೆ ಪ್ರಜ್ಞೆ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ ಈ ಕಾರ್ಯಾಗಾರದಲ್ಲಿ ಹೆಲ್ತ್ ಕಾರ್ಡ್ ನೀಡಲಾಗಿದೆ. ಕಾರ್ಡ್ ನಿಂದಾಗಿ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಹುಬ್ಬಳ್ಳಿ,ಉಡುಪಿ, ಮಂಗಳೂರು ಶಿವಮೊಗ್ಗ ಸೇರಿದಂತೆ ವಿವಿಧಡೆ ರಿಯಾಯತಿ ದರದಲ್ಲಿ ಆರೋಗ್ಯ ಚಿಕಿತ್ಸೆ ದೊರೆಯಲಿದೆ ಎಂದರು.


ಐ. ಎಂ.ಎ ಕಾರ್ಯದರ್ಶಿ ಡಾ. ರಮೇಶ ಗೌಡ, ನಿವೃತ್ತ ಉಪನ್ಯಾಸಕ ಡಾ. ಜಿ.ಪಿ.ಪಾಠಣಕರ್, ನಾಮಧಾರಿ ಸಂಘದ ಕಾರ್ಯದರ್ಶಿ ಎನ್.ಕೆ‌.ನಾಯ್ಕ, ಉಪನ್ಯಾಸಕ ಪ್ರಶಾಂತ ಹೆಗಡೆ ಮೂಡಲಮನೆ, ನೌಕರರ ಸಂಘದ ಅಧ್ಯಕ್ಷ ಅಣ್ಣಪ್ಪ ಮುಕ್ರಿ, ಕರವೇ ಅಧ್ಯಕ್ಷ ಮಂಜುನಾಥ ಗೌಡ, ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ವೇದಿಕೆಯಲ್ಲಿ ವೈದ್ಯರಾದ ಡಾ.ಆಶಿಕ್ ಹೆಗ್ಡೆ, ಮಾಜಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ನಾಯ್ಕ, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ವಿನಾಯಕ ಮೇಸ್ತ, ಉದ್ಯಮಿ ನಿತಿನ್ ಆಚಾರ್ಯ, ತಜೀಂ ಅಧ್ಯಕ್ಷ ಮಹಮ್ಮದ್ ಅಲಿ, ಗುರುದತ್ತ ಮತ್ತಿತರಿದ್ದರು.


ಮಧುರಾ ನಾಯ್ಕ ಪ್ರಾರ್ಥಿಸಿದರು. ಸಂಘಟಕರಾದ ಡಾ.ಪ್ರಕಾಶ ನಾಯ್ಕ ಸ್ವಾಗತಿಸಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ವಂದಿಸಿದರು.‌ ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ಶಿಕ್ಷಕ ಪ್ರಕಾಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಶ್ರೀಮಂತ ಯುಟ್ಯೂಬ್ ಚಾನೆಲ್ ಪ್ರೀಯಾರಾಮ ಬೆಂಡಿಗನವಿಲೆ ಆರೋಗ್ಯ ಕ್ಷೇತ್ರದ ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಉಪನ್ಯಾಸ ನೀಡಿದರು.

About The Author

error: Content is protected !!