ಪ್ರಕೃತಿ ರಕ್ಷಣೆಯೊಂದಿಗೆ ಸನಾತನ ಯುವ ಆರಂಭವಾಗಲಿ: ಡಾ. ರಾಜೇಂದ್ರ ಸಿಂಗ್
ಹೊನ್ನಾವರ: ಶರಾವತಿ ನದಿ ರಕ್ಷಣೆಯ ಹೋರಾಟಕ್ಕೆ ಓರ್ವ ಸ್ವಾಮೀಜಿ ನೇತೃತ್ವ ನೀಡುತ್ತಿದ್ದಾರೆ ಎಂದರೆ ಇದೊಂದು ಐತಿಹಾಸಿಕ ಹೋರಾಟವಾಗಲಿದ್ದು, ಪ್ರಕೃತಿ ಬಗ್ಗೆ ಶ್ರೀ ಮಾರುತಿ ಗುರೂಜಿ ಅವರ ಕಾಳಜಿ ದೇಶದ ಸಾಧು, ಸಂತರಿಗೆ ಮಾದರಿಯಾಗಿದೆ ಎಂದು ಭಾರತದ ಜಲ ಪುರುಷ ಖ್ಯಾತಿಯ ಡಾ. ರಾಜೇಂದ್ರ ಸಿಂಗ್ ರಾಜಸ್ಥಾನ ಅಭಿಪ್ರಾಯಪಟ್ಟರು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದಿಂದ ನಡೆಯುತ್ತಿರುವ ‘ಸಂಸ್ಕೃತಿ ಕುಂಭ – ಮಲೆನಾಡ ಉತ್ಸವ – 2026’ ಇದರ ಮೂರನೇ ದಿನವಾದ ಭಾನುವಾರ ಪಶ್ಚಿಮ ಘಟ್ಟದ ರಕ್ಷಣೆಗಾಗಿ ಜನಾಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಡು, ನದಿ, ಭೂಮಿ, ಪರಿಸರ, ಪ್ರಕೃತಿಯ ರಕ್ಷಣೆಯ ಹೋರಾಟಕ್ಕೆ ಓರ್ವ ವ್ಯಕ್ತಿ ನೇತೃತ್ವ ನೀಡುತ್ತಿದ್ದಾರೆ ಎಂಬುದು ಸಣ್ಣ ವಿಚಾರವಲ್ಲ. ಶ್ರೀ ರಾಮಚಂದ್ರ ಪ್ರಕೃತಿಯ ರಕ್ಷಕನಾಗಿದ್ದು, ಪ್ರಕೃತಿಯ ರಕ್ಷಣೆ ಸನಾತನ ಧರ್ಮದ ಭಾಗವಾಗಿದೆ. ಶರಾವತಿ ನದಿಯ ರಕ್ಷಣೆಗೆ ಈ ನಾಡಿನ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಅವರು ಹೇಳಿದರು.
ಸಾಧು ಸಂತರು ಪ್ರಕೃತಿಯ ರಕ್ಷಕರಾಗಿದ್ದರು. ಇಂದು ಸಾಧು ಸಂತರು ಪ್ರಕೃತಿ ರಕ್ಷಣೆಯನ್ನು ಮರೆತು ಇನ್ಯಾವುದೋ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವಾಗ ಸಾಧು ಸಂತರು ಪ್ರಕೃತಿ ಉಳಿಸುವ ಕಾರ್ಯದಿಂದ ದೂರ ಉಳಿದರೋ ಅಂದಿನಿಂದ ಕಲಿಯುವ ಆರಂಭವಾಯಿತು. ಸಾಧು ಸಂತರು ಪ್ರಕೃತಿಯ ಉಳಿವಿಗೆ ಮತ್ತೆ ಮುಂದಾದರೆ ಸನಾತನ ಯುಗ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ನದಿ ಹಾಗೂ ಪ್ರಕೃತಿಯ ರಕ್ಷಣೆಗೆ ನಾನು ನನ್ನ 50 ವರ್ಷಗಳನ್ನು ಮುಡಿಪಾಗಿಟ್ಟಿದ್ದೇನೆ. ಬತ್ತಿ ಬರುಡಾಗಿದ್ದ 23 ನದಿಗಳನ್ನು ಮತ್ತೆ ಹರಿಯುವಂತೆ ಮಾಡಿದ್ದೇನೆ. ಕೋವಿ ಹಿಡಿದು ಡಕಾಯಿತಿ ನಡೆಸುತ್ತಿದ್ದ ಹಾಗೂ ನಗರಗಳಿಗೆ ವಲಸೆ ಹೋಗಿದ್ದ ಸಾವಿರಾರು ಜನರನ್ನು ಕೃಷಿಯಲ್ಲಿ ತೊಡಗುವಂತೆ ಮಾಡಿದ್ದೇನೆ. ನಾನು ಮಾಡಿರುವುದು ಸನಾತನ ಕೆಲಸ ಎಂದು ಭಾಸವಾಗುತ್ತಿದೆ ಎಂದರು.
ಕರ್ನಾಟಕದಲ್ಲಿ 84 ಶೇಕಡಾ ಅರಣ್ಯ ಇತ್ತು. ಪ್ರಸಕ್ತ ಕೇಲವ 44 ಶೇಕಡಾ ಇದೆ. 40 ಶೇಕಡಾ ಕಾಡು ಏನಾಯಿತು. ಯಾರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗೆ ಮುಂದಿವರಿದರೆ ಮುಂದಿನ ಪೀಳಿಗೆಯ ಪಾಡೇನು. ವಿನಾಶಕಾರಿ ಜನರಿಂದ ಪ್ರಕೃತಿ ನಾಶವಾಗುವುದನ್ನು ತಡೆಯುವವರನ್ನು ನಾನು ದೇವರ ದಾಸರೆಂದೇ ಗುರುತಿಸುತ್ತೇನೆ ಎಂದರು.
ನಾನು ಗಂಗಾ ನದಿಯ ಪುತ್ರ. ಗಾಂಗಾ ನದಿಯ ಉಳಿಸಲು ನಾನು ಪ್ರಾಣ ತ್ಯಾಗಕ್ಕೂ ಸಿದ್ಧ. ಗಾಂಗಾ ತಾಯಿಯೇ ನನ್ನನ್ನು ಇಲ್ಲಿಗೆ ಕರೆದಿದ್ದಾರೆ ಎಂದು 2013ರಲ್ಲಿ ನರೇಂದ್ರ ಮೋದಿ ಉತ್ತರ ಪ್ರದೇಶದಲ್ಲಿ ಭಾಷಣ ಮಾಡಿದಾಗ ನಮಗೆ ಉತ್ಸಾಹ ಮೂಡಿತ್ತು. ಗಾಂಗಾ ನದಿಯನ್ನು ನನ್ನ ತಾಯಿ ಎಂದ ದೇಶದ ಮೊದಲ ಪ್ರಧಾನಿ ಎಂಬ ಕೀರ್ತಿ ಅವರದ್ದು. ಆದರೆ ಬಳಿಕ ಅವರು ಗಂಗಾ ನದಿಯ ರಕ್ಷಣೆಗೆ ಎನು ಮಾಡಿದ್ದಾರೆ ಎಂಬುದು ದೇಶದ ಜನತೆಗೆ ತಿಳಿದಿದೆ. ಭಾಷಣ ಮಾಡುವವರಿಂದ ಹಾಗೂ ಭಾಷಣದಿಂದ ಪ್ರಕೃತಿಯ ರಕ್ಷಣೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಶರಾವತಿ ಉಳಿಯಬೇಕಾದರೆ ಯಾವ ತ್ಯಾಗಕ್ಕೂ ಈ ನಾಡಿನ ಜನರು ಸಿದ್ಧರಾಗಬೇಕು. ಸಣ್ಣ ಸಂಖ್ಯೆಯ ಜನರಿಂದ ಹೋರಾಟ ನಡೆದರೆ ಸರಕಾರ ಎಚ್ಚೆತ್ತುಕೊಳ್ಳದು. ನಾಡಿಗೆ ನಾಡೇ ಒಂದಾಗಿ ಹೋರಾಟಕ್ಕೆ ಧುಮುಕಿದಾಗ ಹೋರಾಟ ಯಶಸ್ವಿ ಆಗಲು ಸಾಧ್ಯವಿದೆ ಎಂದು ಅವರು ಹೇಳಿದರು.
ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿ ಅಧ್ಯಕ್ಷತೆ ಹಾಗೂ ದಿವ್ಯ ಸಾನಿಧ್ಯ ವಹಿಸಿದ್ದರು. ಯಾದಗಿರಿ ಅದೋನಿ ಶ್ರೀ ಶಂಕರಾನಂದ ಸರಸ್ವತಿ ಮಹಾಸಂಸ್ಥಾನಮ್ ಶ್ರೀ ಶಾರದಾ ದತ್ತಪೀಠದ ಶ್ರೀ ಶ್ರೀ ಶ್ರೀ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತಿ ಮಹಾಸ್ವಾಮಿ, ಶಿರಳಗಿ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಉಪಸ್ಥಿತರಿದ್ದು ಉಪದೇಶ ನೀಡಿದರು.
ಕಪ್ಪೆ ಶಾಸ್ತ್ರಜ್ಞ ಪ್ರೊ. ಡಾ. ಗುರುರಾಜ್ ಕೆ.ವಿ., ಪರಿಸರವಾದಿ, ಕೃಷಿ ಪತ್ರಕರ್ತ, ಲೇಖಕ ಶಿವಾನಂದ ಕಳವೆ, ಪರಿಸರ ಹೋರಾಟಗಾರ ದಿನೇಶ್ ಹೊಳ್ಳ, ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್, ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಉಪಸ್ಥಿತರಿದ್ದು ಸಂವಾದ ನಡೆಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಗೇರುಸೊಪ್ಪ ಶ್ರೀ ಕ್ಷೇತ್ರದ ವನವಾಸಿ ಸೀತಾ ರಾಮ ಮಂದಿರದಿಂದ ಬಂಗಾರಮಕ್ಕಿ ಕ್ಷೇತ್ರದ ವರೆಗೆ ಶರಾವತಿ ಉಳಿಸಿ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು. ಬಳಿಕ ಪಶ್ಚಿಮ ಘಟ್ಟದ ಮಾಹಿತಿ ಫಲಕವನ್ನು ಡಾ. ರಾಜೇಂದ್ರ ಸಿಂಗ್ ಉದ್ಘಾಟಿಸಿದರು.

More Stories
‘ಶರಾವತಿ ಆರತಿ’
ಸಂಸ್ಕೃತ ಕುಂಭ – ಮಲೆನಾಡ ಉತ್ಸವ 2026, ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ‘ಸಾಹಿತ್ಯೋತ್ಸವ’ ಕಾರ್ಯಕ್ರಮ
ನಾಳೆ ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಪಶ್ಚಿಮ ಘಟ್ಟ ರಕ್ಷಣೆಗೆ ಜನಾಂದೋಲನ