April 16, 2026

ಸಡಗರ ಸಂಭ್ರಮದಿಂದ ನಡೆದ ಶ್ರೀ ಲಕ್ಷ್ಮೀದೇವಿ ಅಮ್ಮನವರ ಬ್ರಹ್ಮರಥೋತ್ಸವ


ಕೃಷ್ಣರಾಜಪೇಟೆ: ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಹೆತ್ತಗೋನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನೆರವೇರಿತು.


ರಥೋತ್ಸವಕ್ಕೆ ರಾಜ್ಯದ ಮಾಜಿ ಸಚಿವರು ಹಾಗೂ ಅರಕಲಗೂಡು ಕ್ಷೇತ್ರದ ಶಾಸಕರಾದ ಎ. ಮಂಜು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, “ನಮ್ಮ ಮನೆದೇವರಾದ ಶ್ರೀ ಮಾಯಮ್ಮ ದೇವಿ/ಲಕ್ಷ್ಮೀದೇವಿ ಅಮ್ಮನವರ ರಥೋತ್ಸವದಲ್ಲಿ ಭಾಗವಹಿಸಿರುವುದು ನನಗೆ ಅಪಾರ ಸಂತೋಷ ತಂದಿದೆ. ಕಳೆದ 15 ವರ್ಷಗಳಿಂದ ಕಾರ್ಯಭಾರಗಳ ಒತ್ತಡದಿಂದ ಜಾತ್ರೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಈ ಬಾರಿ ಭಾಗವಹಿಸಿದ್ದೇನೆ,” ಎಂದು ಹೇಳಿದರು.


ಹಬ್ಬ-ಜಾತ್ರೆಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಎಲ್ಲಾ ಜಾತಿ-ವರ್ಗಗಳ ಜನರು ಭಕ್ತಿಭಾವದಿಂದ ಭಾಗವಹಿಸಿ ದೇವಿಯ ಸೇವೆ ಮಾಡುವ ಮೂಲಕ ಕೃತಾರ್ಥರಾಗುತ್ತಾರೆ. ಇದು ದೇವಿಯ ಮಹಿಮೆ ಎಂದರು.
ಕಾರ್ಯಕ್ರಮದಲ್ಲಿ ಕೆ.ಆರ್. ಪೇಟೆ ಕ್ಷೇತ್ರದ ಶಾಸಕ ಎಚ್.ಟಿ. ಮಂಜು ಅವರು ಎ. ಮಂಜು ಅವರನ್ನು ಸ್ವಾಗತಿಸಿ, ಗ್ರಾಮಸ್ಥರ ವತಿಯಿಂದ ಸನ್ಮಾನಿಸಿದರು. ನಂತರ ಭಕ್ತರೊಂದಿಗೆ ಸಾಮೂಹಿಕ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.


ತಾಲೂಕು ಕೃಷಿಕ ಸಮಾಜದ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ನಾರಾಯಣಗೌಡ ಅವರು ರಥೋತ್ಸವದ ನೇತೃತ್ವ ವಹಿಸಿ ಮಾತನಾಡಿ, “ಶಾಸಕರ ಆಗಮನದಿಂದ ಜಾತ್ರೆಯ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ,” ಎಂದರು.


ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿ ತಾಯಿಯ ರಥಕ್ಕೆ ಹಣ್ಣು-ಜವನ ಸಮರ್ಪಿಸಿದರು. “ಉಘೇ ಲಕ್ಷ್ಮೀದೇವಿ, ಉಘೇ ಮಾಯಮ್ಮ” ಎಂಬ ಜಯಘೋಷಗಳು ಗಗನಮುಟ್ಟಿದವು.
ವರದಿ: ಡಾ. ಕೆ.ಆರ್. ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ

About The Author

error: Content is protected !!