ಹೋನ್ನಾವರ : ಸಾಹಿತ್ಯ ಅಕ್ಷರಗಳ ಜೋಡಣೆಯಲ್ಲ. ಸಮಾಜ ಸುಧಾರಣೆಗೆ ದಾರಿ ತೋರಿಸುವ ಬೆಳಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗೇಶ್ ಶೆಟ್ಟಿ ನುಡಿದರು. ಅವರು ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಒಂದು ಕಾಲಕ್ಕೆ ಪುಸ್ತಕ ರೂಪದಲ್ಲಿಯೇ ವಿಚಾರಗಳನ್ನು ಅಭಿವ್ಯಕ್ತಿ ಪಡಿಸಬೇಕಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಸಾಮಾಜಿಕ ಜಾಲ ತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ವೈಚಾರಿಕ ಚಿಂತನೆಗಳನ್ನು, ಸೃಜನಶೀಲ ಬರೆವಣಿಗೆಗಳನ್ನು ದಾಟಿಸಬಹುದು ಎಂದರಲ್ಲದೆ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಗಿದ್ದು ಏಕೀಕರಣ ಸಂದರ್ಭದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಸಾಹಿತ್ಯ ಪರಿಷತ್ತನ್ನು ಹಾಗೆಯೇ ಅದರ ಸಂಸ್ಥಾಪಕರನ್ನು ಸದಾ ಸ್ಮರಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆ. ಕನ್ನಡ ಸಾಹಿತ್ಯವನ್ನು, ಲೇಖಕರನ್ನು ಉತ್ತೇಜಿಸುವುದು, ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸುವ ಮೂಲಕ ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಪರಿಷತ್ತು ಮಾಡುತ್ತಿದೆ. ಎಲ್ಲ ವಿದ್ಯಾರ್ಥಿಗಳು ಪರಿಷತ್ತಿನ ಆಜೀವ ಸದಸ್ಯತ್ವ ಪಡೆದುಕೊಳ್ಳಬೇಕೆಂದು ಕರೆ ನೀಡಿದರಲ್ಲದೇ ನಮ್ಮ ನಾಡು ನುಡಿಗೆ ನಮ್ಮ ನೆಲೆಯಲ್ಲಿ ಕೊಡುಗೆ ನೀಡುವಂತಾಗಬೇಕು ಎಂದು ನುಡಿದರು.
ಕಸಾಪ ಗೌರವ ಕೋಶಧ್ಯಕ್ಷ,, ಸಾಹಿತಿ ಶ್ರೀಧರ್ ಶೇಟ್ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಹಿನ್ನೆಲೆ, ಸಾಧನೆಯ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕಸಾಪ ಆಜೀವ ಸದಸ್ಯ, ವಿಜಯ ಬ್ಯಾಂಕ್ ನಿವೃತ್ತ ಮುಖ್ಯ ವ್ಯವಸ್ಥಾಪಕ ಎಂ. ಆರ್. ನಾಯ್ಕ ಸಾಂದರ್ಭಿಕವಾಗಿ ಮಾತನಾಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿಯ ಉದ್ಯೋಗವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನುಡಿದರು. ಸಾಹಿತಿ ಮಾನಾಸುತ ಶಂಭು ಹೆಗಡೆ ಸಾಹಿತ್ಯ ಪರಿಷತ್ತು ನಮ್ಮೆಲ್ಲರ ಅಭಿಮಾನದ ಸಂಸ್ಥೆಯಾಗಿದ್ದು ಸಂಸ್ಥಾಪನ ದಿನಾಚರಣೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಾಹಿತ್ಯ ಪರಿಷತ್ತಿನ ಇತಿಹಾಸವನ್ನು ಸ್ಮರಿಸಿ ಕೊಳ್ಳಬೇಕು ಎಂದು ನುಡಿದು ಸ್ವರಚಿತ ಕವನ ವಾಚಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಲಾಯಿತು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ನಾಗೇಶ್ ಶೆಟ್ಟಿ ಅವರನ್ನು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿ ಎಲ್ಲರನ್ನು ಸ್ವಾಗತಿಸಿ ವಂದಿಸಿದರು. ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

More Stories
ಹನುಮಾನ್ ನಗರ ಶಾಲಾ ಆವರಣದಲ್ಲಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಒತ್ತಾಯ
ಮುಂಗಾರು ಮುನ್ನ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಎಸಿ ಸೂಚನೆ
ಹಿಂದೂ ಕೊಂಕಣಿ ಪ್ರಿಮಿಯರ್ ಲೀಗ್: ರಂಜನ್ ಚಾಲೆಂಜರ್ಸ್ ಭಟ್ಕಳ ಚಾಂಪಿಯನ್