May 23, 2026

ಅಥಣಿಯ ಬೆನ್ನಿಪೇಟೆಯಲ್ಲಿ ಅರ್ಧಕ್ಕೆ ನಿಂತ ಶೌಚಾಲಯ ಕಾಮಗಾರಿ

ಮಹಿಳೆಯರ ಪರದಾಟ, ದುರ್ವಾಸನೆಯ ನಡುವೆ ಸಾರ್ವಜನಿಕರ ಆಕ್ರೋಶ

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪ್ರಮುಖ ವಾಣಿಜ್ಯ ಪ್ರದೇಶವಾದ ಬೆನ್ನಿಪೇಟೆಯಲ್ಲಿ ಸಾರ್ವಜನಿಕ ಶೌಚಾಲಯದ ಕೊರತೆ ಜನರ ನಿತ್ಯದ ಸಮಸ್ಯೆಯಾಗಿ ಪರಿಣಮಿಸಿದೆ. ಶಿವಣಗಿ ಕಾಂಪ್ಲೆಕ್ಸ್ ಹಿಂಭಾಗ ಹಾಗೂ ಜಿ-ಮಾರ್ಟ್ ಎದುರು ಭಾಗದಲ್ಲಿ ನಿರ್ಮಾಣವಾಗುತ್ತಿದ್ದ ಸಾರ್ವಜನಿಕ ಶೌಚಾಲಯ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶೌಚಾಲಯ ನಿರ್ಮಾಣ ಪೂರ್ಣಗೊಳ್ಳದೇ ಇರುವ ಕಾರಣ ಜನರು ಅನಿವಾರ್ಯವಾಗಿ ಅದೇ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ಪರಿಸರವನ್ನು ಗಬ್ಬೆದ್ದು ನಾರುವಂತಾಗಿಸಿದೆ. ಪರಿಣಾಮ ವ್ಯಾಪಾರಸ್ಥರು, ಮಹಿಳೆಯರು ಹಾಗೂ ದಾರಿಹೋಕರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಲೇರಿಯಾ, ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ.

ಹೆಚ್ಚು ಜನ ಸಂಚಾರವಿರುವ ಈ ಪ್ರದೇಶದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಹಾಗೂ ಸುಸಜ್ಜಿತ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ಮಹಿಳಾ ಘನತೆಗೆ ಧಕ್ಕೆ ತರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮಹಿಳಾ ಸುರಕ್ಷತೆ ಮತ್ತು ಸೌಕರ್ಯದ ಬಗ್ಗೆ ಸರ್ಕಾರಗಳು ಘೋಷಣೆಗಳನ್ನು ಮಾಡುತ್ತಿದ್ದರೂ, ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಆಡಳಿತ ವಿಫಲವಾಗಿದೆ ಎಂಬ ಆಕ್ರೋಶ ಕೇಳಿಬರುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಾಮಾಜಿಕ ಹೋರಾಟಗಾರ ಪ್ರವೀಣ್ ನಾಯಕ್, “ಸ್ವಚ್ಛ ಭಾರತ ಅಭಿಯಾನದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿದ್ದರೂ ಜನರಿಗೆ ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ. ಈ ಸಮಸ್ಯೆ ಕುರಿತು ಹಲವು ಬಾರಿ ಮಾಧ್ಯಮಗಳಲ್ಲಿ ವರದಿಯಾಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣೆ ವೇಳೆ ಭರವಸೆ ನೀಡುವ ಜನಪ್ರತಿನಿಧಿಗಳು ನಂತರ ಜನರ ಸಮಸ್ಯೆಗಳ ಕಡೆ ತಿರುಗಿ ನೋಡುವುದಿಲ್ಲ,” ಎಂದು ಕಿಡಿಕಾರಿದರು.

ಸ್ಥಳೀಯರು ಹಾಗೂ ವ್ಯಾಪಾರಸ್ಥರು ಅರ್ಧಕ್ಕೆ ನಿಂತಿರುವ ಶೌಚಾಲಯ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ, ಮಹಿಳೆಯರಿಗಾಗಿ ಸ್ವಚ್ಛ ಮತ್ತು ಸುರಕ್ಷಿತ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ. ಜೊತೆಗೆ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಲು ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ತಾಲೂಕು ಆಡಳಿತ ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಸಮಸ್ಯೆ ಶೀಘ್ರ ಪರಿಹಾರವಾಗದಿದ್ದರೆ ಮುಂದಿನ ದಿನಗಳಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಒಗ್ಗೂಡಿ ಪುರಸಭೆ ವಿರುದ್ಧ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವರದಿ: ಮಹೇಶ್ ಶರ್ಮಾ

About The Author

error: Content is protected !!