ಭಟ್ಕಳ: ಭಟ್ಕಳದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಮಸ್ಯೆಗಳ ಕುರಿತು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಬಾಕಿ ಉಳಿದಿರುವ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಸಭೆಯ ಆರಂಭದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು, ಹೆದ್ದಾರಿ ಕಾಮಗಾರಿಗೆ ಭೂಸ್ವಾಧೀನ ಅಡ್ಡಿಯಾಗಿದ್ದರೆ ತಕ್ಷಣ ಸಮಸ್ಯೆ ಬಗೆಹರಿಸಿ ಜಾಗ ಹಸ್ತಾಂತರ ಮಾಡುವಂತೆ ಭಟ್ಕಳ ಉಪವಿಭಾಗಾಧಿಕಾರಿ ಜೆ. ಮಹೇಶ್ ಅವರಿಗೆ ಸೂಚಿಸಿದರು.
ಈ ವೇಳೆ ಐಆರ್ಬಿ ಅಧಿಕಾರಿಗಳು, ಕೋಟೇಶ್ವರ ಕ್ರಾಸ್ ಸಮೀಪದ ಪೌರಕಾರ್ಮಿಕರ ಕಾಲೋನಿ ನಿವಾಸಿಗಳು ಪರಿಹಾರಧನ ಸಿಗದ ಕಾರಣ ಜಾಗ ಬಿಟ್ಟುಕೊಟ್ಟಿಲ್ಲ. ಇದರಿಂದ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ನಗರಸಭೆ ಪೌರಾಯುಕ್ತ ಬಾಬಾಸಾಹೇಬ ಮಾನೆ ಅವರಿಗೆ ಜಾಗ ತೆರವುಗೊಳಿಸಿ ಕಾಮಗಾರಿಗೆ ಅವಕಾಶ ಕಲ್ಪಿಸುವಂತೆ ಸೂಚಿಸಿದರು.
ರಸ್ತೆ ಕಾಮಗಾರಿಯ ಪ್ರಗತಿ ಹಾಗೂ ಮಳೆ ನೀರು ಹರಿವಿನ ವ್ಯವಸ್ಥೆ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಹೆದ್ದಾರಿಯಲ್ಲಿ ನಿಂತ ನೀರು ಯಾವ ನದಿಗೆ ಸೇರುತ್ತದೆ ಎಂಬುದರ ಕುರಿತು ಪ್ರಶ್ನಿಸಿದರು. ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಸಂಚಾರಕ್ಕೆ ಅಡಚಣೆ ಉಂಟಾಗದAತೆ ಹಾಗೂ ಅಪಘಾತಗಳನ್ನು ತಡೆಗಟ್ಟಲು ಅಗತ್ಯ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ ವಾಹನ ಸವಾರರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಅಧಿಕಾರಿಗಳು, ಐಆರ್ಬಿಯಿಂದ ಹೆದ್ದಾರಿ ನೀರು ಹರಿವಿಗೆ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ ನೀರಿನ ಅಂತಿಮ ಹರಿವಿನ ಕುರಿತು ಸ್ಪಷ್ಟ ಯೋಜನೆ ಇಲ್ಲ ಎಂದು ತಿಳಿಸಿದರು. ಸಂಶುದ್ದೀನ್ ಸರ್ಕಲ್ನಿಂದ ಬಂದರ್ ರಸ್ತೆವರೆಗೆ ಬೃಹತ್ ಚರಂಡಿ ನಿರ್ಮಿಸಿ, ಡಾರಂಟಾ ಬಳಿ ಕಲ್ವರ್ಟ್ ಮೂಲಕ ಶರಾಬಿ ನದಿಗೆ ನೀರು ಹರಿಸುವ ಅವಕಾಶವಿದೆ ಎಂದು ವಿವರಿಸಿದರು. ಈ ಕುರಿತು ಪುರಸಭೆಯಿಂದ ಸಮಗ್ರ ನೀಲನಕ್ಷೆ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ತಹಶೀಲ್ದಾರ ನಾಗೇಂದ್ರ ಕೊಳಶೆಟ್ಟಿ, ಹೆದ್ದಾರಿ ಯೋಜನಾಧಿಕಾರಿ ಶ್ರೀನಿವಾಸ, ಐಆರ್ಬಿ ಇಂಜಿನಿಯರ್ ಸುದೇಶ್, ಪುರಸಭೆ ಇಂಜಿನಿಯರ್ ಅರವಿಂದ್, ವೆಂಕಟೇಶ ನಾವುಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

More Stories
ಬಕ್ರೀದ್ ಹಿನ್ನೆಲೆ ಭಟ್ಕಳದಲ್ಲಿ ಕಟ್ಟೆಚ್ಚರ: ಮೇ 30ರವರೆಗೆ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲೇ ಇರಲು ಸೂಚನೆ
ಮನೆ ಕಳ್ಳತನ ಪ್ರಕರಣ: 8 ಗಂಟೆಯೊಳಗೆ ಆರೋಪಿಗಳ ಬಂಧನ
ಎಲ್ಲರ ಮೆಚ್ಚುಗೆಗೆ ಪಾತ್ರವಾದ ಬಿಬಿಎ ವಿಭಾಗದ ಬಿಜ್ ಲೀಡ್ ಎಕ್ಸ್ 2025-26 ಗ್ರ್ಯಾಂಡ್ ಫಿನಾಲೆ