ಭಟ್ಕಳ : ತಾಲೂಕಿನ ಶಿರಾಲಿಯ ಕೋಟೆಬಾಗಿಲಿನ ಸೇಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಶ್ರೀಶಾ ಶ್ರೀಧರ ಶೇಟ್ ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಮರುಮೌಲ್ಯಮಾಪನದ ನಂತರ ನಾಲ್ಕು ಅಂಕ ಹೆಚ್ಚು ಗಳಿಸಿ ರಾಜ್ಯಕ್ಕೆ 10ನೇ ರ್ಯಾಂಕ್ ಗಳಿಸಿದ್ದಾಳೆ.


ಯಾವುದೇ ಕೋಚಿಂಗ್ ಅಥವಾ ಟ್ಯೂಶನ್ ಗೆ ಹೋಗದೆ, ಗುರುಗಳು ಮತ್ತು ಪಾಲಕರು ಕಲಿಸಿದ್ದನ್ನು ಅಧ್ಯಯನ ಮಾಡಿ, ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 616 ಅಂಕಗಳನ್ನು(ಶೇ.98.56) ಗಳಿಸಿ ರಾಜ್ಯಕ್ಕೆ ಹತ್ತನೇ ರ್ಯಾಂಕ್ ಮತ್ತು ಶಿರಾಲಿಯ ಸೇಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆಗೆ ಪ್ರಥಮ ರ್ಯಾಂಕ್ ಅನ್ನು ಗಳಿಸಿರುತ್ತಾಳೆ. ಬಹುಮುಖ ಪ್ರತಿಭೆಯ ವಿದ್ಯಾರ್ಥಿನಿಯಾಗಿರುವ ಈಕೆ,ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದು,ಉತ್ತಮ ಚಿತ್ರ ಕಲಾವಿದೆಯೂ ಆಗಿ ಹೆಸರು ಮಾಡಿದ್ದಾಳೆ. ಭಟ್ಕಳದ ಝೇಂಕಾರ್ ಕಲಾ ಶಾಲೆಯ ಚಿತ್ರಕಲಾ ಶಿಕ್ಷಕರಾದ ಸಂಜಯ ಗುಡಿಗಾರರವರಲ್ಲಿ ತರಬೇತಿಯನ್ನು ಪಡೆದಿದ್ದು, ಜ್ಯೂನಿಯರ್ ಮತ್ತು ಸಿನೀಯರ್ ಗ್ರೇಡ್ ಪರೀಕ್ಷೆಗಳನ್ನು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿರುತ್ತಾಳೆ.ಭಟ್ಕಳ ತಾಲೂಕಿನ ಅಳ್ವೆಕೋಡಿಯಲ್ಲಿ ಜರುಗಿದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವಳ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಉತ್ತಮ ಭಾಷಣಗಾರ್ತಿ ಮತ್ತು ಕಾರ್ಯಕ್ರಮ ನಿರೂಪಕಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿರುವ ಈಕೆ ಯಕ್ಷಗಾನ ನೃತ್ಯದಲ್ಲೂ ಪಳಗಿದ್ದಾಳೆ.

ಇವಳು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಸಾಹಿತಿ ಶ್ರೀ ಶ್ರೀಧರ ಶೇಟ್ ಶಿರಾಲಿ ಮತ್ತು ಶಿಕ್ಷಕಿ ಶ್ರೀಮತಿ ಹೇಮಲತಾ ದಂಪತಿಗಳ ಸುಪುತ್ರಿ. ಈಕೆಯ ಈ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯ ಸ್ಯಾಮ್ಯುಯೆಲ್ ವರ್ಗಿಸ್, ಶಿಕ್ಷಕ ವೃಂದ ಮತ್ತು ಸಂಘ ಸಂಸ್ಥೆಗಳ ಮುಖ್ಯಸ್ಥರು ಅಭಿನಂದನೆಗಳನ್ನು ತಿಳಿಸಿದ್ದಾರೆ.


More Stories
ಹೆದ್ದಾರಿ ಅಪಘಾತಕ್ಕೆ ಸ್ಕೂಟಿ ಸವಾರ ಬಲಿ: ಅವೈಜ್ಞಾನಿಕ ವಿನ್ಯಾಸ ಆರೋಪಿಸಿ ಭಟ್ಕಳದಲ್ಲಿ ಸಾರ್ವಜನಿಕರ ಆಕ್ರೋಶ, ಪ್ರತಿಭಟನೆ
ಲಂಡನ್ನಲ್ಲಿ ‘ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್’ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಟ್ಕಳದ ಹೆಮ್ಮೆಯ ಯುವಕ ಪ್ರಜ್ವಲ್ ನಾಯ್ಕ
ಬೈಲೂರು ಕ್ಲಸ್ಟರ್ನ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮುಂಬೈನ ಅನಿರುದ್ಧ ಬಾಪು ಟ್ರಸ್ಟ್ನಿಂದ ಉಚಿತ ನೋಟ್ಬುಕ್ ವಿತರಣೆ