June 11, 2026

ಬರ್ಗಿಯ ಸಂಸ್ಕೃತ ವಿದ್ಯಾರ್ಥಿಗಳಿಗೆ  ಕೊಡೆ ವಿತರಣೆ

ಕುಮಟಾ : ತಾಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ಸಂಸ್ಕೃತ ವಿದ್ಯಾರ್ಥಿಗಳಿಗೆ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದ ಆಶ್ರಯದಲ್ಲಿ ಗೋಕರ್ಣದ ಗೋದಾವರಿ ಸೌಹಾರ್ದ ಸಹಕಾರಿಯಿಂದ ಉಪಯುಕ್ತ ಕೊಡೆಗಳನ್ನು ವಿತರಿಸಲಾಯಿತು.

ಗೋದಾವರಿ ಸೌಹಾರ್ದ ಸಹಕಾರಿಯ ಸಂಸ್ಥಾಪಕ-ಅಧ್ಯಕ್ಷ ರಾಘವೇಂದ್ರ ನಾಯಕರವರ ಪರವಾಗಿ ರೂಪಾಲಿ ನಾಯಕರವರು ವಿದ್ಯಾರ್ಥಿಗಳಿಗೆ ಕೊಡೆಗಳನ್ನು ವಿತರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಭಕ್ತಿಯಿಂದ ವಿದ್ಯಾಭ್ಯಾಸ ಮಾಡಿ ಉನ್ನತ ಸಾಧನೆ ಮಾಡಬೇಕು ಎಂದು ಕರೆ ನೀಡಿದ ಅವರು, ಶೈಕ್ಷಣಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಗೋದಾವರಿ ಸೌಹಾರ್ದದ ಬೆಂಬಲ ಸದಾ ಮುಂದುವರಿಯಲಿದೆ ಎಂದು ತಿಳಿಸಿದರು.

ಕಳೆದ ವರ್ಷದಂತೆ ಈ ವರ್ಷವೂ ಸಂಸ್ಕೃತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕೊಡೆಗಳನ್ನು ನೀಡಿರುವ ಗೋದಾವರಿ ಸೌಹಾರ್ದದ ರಾಘವೇಂದ್ರ ನಾಯಕರವರ ಸಂಸ್ಕೃತ ಭಾಷೆಯ ಮೇಲಿನ ಪ್ರೀತಿ, ಶಿಕ್ಷಣದ ಬಗೆಗಿನ ಕಳಕಳಿ ಹಾಗೂ ಮಾನವೀಯತೆಯನ್ನು ಸಂಸ್ಕೃತ ಅಧ್ಯಾಪಕ ಮಂಜುನಾಥ ಗಾಂವ್ಕರ್ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಾಧ್ಯಾಪಕ ಮಧುಕೇಶ್ವರ ನಾಯ್ಕರವರ ಪರವಾಗಿ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬರ್ಗಿ ಪ್ರೌಢ ಶಾಲೆಯ ಸಂಸ್ಕೃತ ವಿದ್ಯಾರ್ಥಿಗಳಿಗೆ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ನೀಡಲಾಗುತ್ತಿರುವ ಎರಡನೇ ಕೊಡುಗೆಯಿದು. ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ವಹಿಸಿದ ರಾಘವೇಂದ್ರ ನಾಯಕರವರನ್ನು ವಿದ್ಯಾಪೀಠದ ಪರವಾಗಿ ಕನ್ನಡ ಭಾರತೀ ಪ್ರಪಂಚದ ಸಂಚಾಲಕ ನಾಗನೆಲೆಯ ನಾರಾಯಣ ನಾಗು ನಾಯಕರವರು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ವಿದ್ಯಾಪೀಠದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

error: Content is protected !!