July 26, 2026

ಅವ್ಯವಸ್ಥೆಯ ತಾಣವಾದ ಮುರ್ಡೇಶ್ವರ ಬಸ್ ನಿಲ್ದಾಣ: ಸುಧಾರಣೆ ಕಾಣುವುದು ಯಾವಾಗ?

ಭಟ್ಕಳ: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು ಪ್ರತಿದಿನ ಆಗಮಿಸುವ ವಿಶ್ವಪ್ರಸಿದ್ಧ ಮುರ್ಡೇಶ್ವರದ ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ನಿರ್ವಹಣೆಯ ಅಭಾವದಿಂದ ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ.
ಪ್ರತಿದಿನ 50ಕ್ಕೂ ಹೆಚ್ಚು ಬಸ್‌ಗಳು ಹಾಗೂ 2,000ಕ್ಕೂ ಅಧಿಕ ಪ್ರಯಾಣಿಕರ ಓಡಾಟವಿರುವ ಈ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ.

ಬಸ್ ನಿಲ್ದಾಣ ಎದುರಿಸುತ್ತಿರುವ ಮುಖ್ಯ ಸಮಸ್ಯೆಗಳು

ಅಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ: ಎಲ್ಲೆಂದರಲ್ಲಿ ಕಸದ ರಾಶಿ, ದುರ್ವಾಸನೆ ಬೀರುವ ಚರಂಡಿಗಳು, ಗೋಡೆಗಳ ಮೇಲೆ ಗುಟ್ಕಾ ಉಗುಳಿದ ಕಲೆಗಳು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಶೌಚಾಲಯಗಳಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಮೂಲಸೌಕರ್ಯಗಳ ಅಭಾವ: ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು, ರಾತ್ರಿ ವೇಳೆ ಬೆಳಕಿನ ಅಭಾವ ಹಾಗೂ ಮಳೆ ಬಂದಾಗ ಮೇಲ್ಛಾವಣಿಯಿಂದ ನೀರು ಸೋರುವುದು ಪ್ರಯಾಣಿಕರಿಗೆ ಕಿರಿಕಿರಿಯುಂಟುಮಾಡುತ್ತಿದೆ.

ಸಂಚಾರ ಗೊಂದಲ: ಸೂಕ್ತ ಫ್ಲಾಟ್‌ಫಾರಂ ವ್ಯವಸ್ಥೆ ಹಾಗೂ ಮಾರ್ಗಸೂಚಿ ಫಲಕಗಳಿಲ್ಲದೆ ಬಸ್‌ಗಳು ಅಸ್ತವ್ಯಸ್ತವಾಗಿ ನಿಲ್ಲುವುದರಿಂದ ಸಾರ್ವಜನಿಕರು ಗೊಂದಲಕ್ಕೀಡಾಗುತ್ತಿದ್ದಾರೆ.

ಆಸನಗಳ ದುರ್ಬಳಕೆ: ಪ್ರಯಾಣಿಕರಿಗಾಗಿ ಇರುವ ಆಸನಗಳ ಮೇಲೆಯೇ ಕೆಲವರು ಮಲಗಿಕೊಳ್ಳುತ್ತಿದ್ದು, ನಿರ್ವಹಣೆಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ.

    ಸಾರ್ವಜನಿಕರ ಆಗ್ರಹ ಮತ್ತು ಪ್ರತಿಕ್ರಿಯೆ

    “ಮುರ್ಡೇಶ್ವರಕ್ಕೆ ಬರುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸಿ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತ ತಕ್ಷಣ ಕಲ್ಪಿಸಬೇಕು.”
    ಶ್ರೀಧರ ನಾಯ್ಕ, ಆಟೋ ಚಾಲಕ

    ಪ್ರಮುಖ ಪ್ರವಾಸಿ ತಾಣವಾಗಿರುವ ಮುರ್ಡೇಶ್ವರದ ಪ್ರತಿಷ್ಠೆಗೆ ತಕ್ಕಂತೆ ಬಸ್ ನಿಲ್ದಾಣವನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂಬುದು ಸಾರ್ವಜನಿಕರ ಬಹುಕಾಲದ ಬೇಡಿಕೆಯಾಗಿದೆ. ಪ್ರವಾಸೋದ್ಯಮದ ಹೆಗ್ಗುರುತಾಗಿರುವ ಈ ಕೇಂದ್ರಕ್ಕೆ ಆಗಮಿಸುವವರಿಗೆ ಬಸ್ ನಿಲ್ದಾಣವೇ ಮೊದಲ ಅನುಭವ ನೀಡಲಿದ್ದು, ಸಂಬಂಧಪಟ್ಟ ಇಲಾಖೆಗಳು ಹಾಗೂ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಇದನ್ನು ಪ್ರಯಾಣಿಕ ಸ್ನೇಹಿ ಕೇಂದ್ರವನ್ನಾಗಿ ಮಾರ್ಪಡಿಸಬೇಕಿದೆ.

    About The Author

    error: Content is protected !!