July 26, 2026

ಕರ್ತವ್ಯನಿಷ್ಠೆಗೆ ರಾಜ್ಯಮಟ್ಟದ ಗೌರವ: ಹೆಡ್ ಕಾನ್ಸ್‌ಟೇಬಲ್ ದೀಪಕ್ ನಾಯ್ಕಗೆ ಡಿ.ಜಿ.–ಐಜಿಪಿ ಶ್ಲಾಘನಾ ಚಿನ್ನದ ಪದಕ

ಭಟ್ಕಳ: ಬೆಂಗಳೂರು ನಗರದ ಕೋರಮಂಗಲದಲ್ಲಿರುವ 3ನೇ ಪಡೆ ಕೆಎಸ್‌ಆರ್‌ಪಿ (KSRP) ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಗೌರವ ಪ್ರದಾನ ಸಮಾರಂಭದಲ್ಲಿ ಭಟ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ದೀಪಕ್ ನಾಯ್ಕ ಅವರು ಪ್ರತಿಷ್ಠಿತ ಡಿ.ಜಿ. ಮತ್ತು ಐಜಿಪಿ ಶ್ಲಾಘನಾ ಚಿನ್ನದ ಪದಕ ಸ್ವೀಕರಿಸಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಅವರ ಈ ಸಾಧನೆಯು ಭಟ್ಕಳ ಪೊಲೀಸ್ ಇಲಾಖೆಗೆ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆಯ ಕ್ಷಣವಾಗಿದೆ.

ಸೇವೆ ಹಾಗೂ ಕಾರ್ಯದಕ್ಷತೆಗೆ ಒಲಿದ ಗೌರವ

ನಿರಂತರ ಸೇವೆ: ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಜನಸ್ನೇಹಿ ಸೇವೆಯ ಮೂಲಕ ಹೆಸರುವಾಸಿಯಾಗಿರುವ ದೀಪಕ್ ನಾಯ್ಕ ಅವರು ಕಾನೂನು-ಸುವ್ಯವಸ್ಥೆ ಕಾಪಾಡುವುದು, ಅಪರಾಧ ತನಿಖೆ ಹಾಗೂ ಸಾರ್ವಜನಿಕರ ದೂರುಗಳಿಗೆ ತ್ವರಿತ ಸ್ಪಂದನೆಯಲ್ಲಿ ಹೆಸರು ಮಾಡಿದ್ದಾರೆ.

ಹಾಡುವಳ್ಳಿ ಚತುರ್ಕೊಲೆ ಪ್ರಕರಣದಲ್ಲಿ ಪ್ರಮುಖ ಪಾತ್ರ: ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದ ತನಿಖೆಯಲ್ಲಿ ಸಾಕ್ಷ್ಯಾಧಾರ ಕ್ರೋಡೀಕರಣ, ಸಾಕ್ಷಿದಾರರ ಸಮನ್ವಯ ಹಾಗೂ ದಾಖಲೆ ನಿರ್ವಹಣೆಯಲ್ಲಿ ಅವರು ಜವಾಬ್ದಾರಿಯುತ ಪಾತ್ರ ವಹಿಸಿದ್ದರು.

ನ್ಯಾಯಾಲಯದ ಶ್ಲಾಘನೆ: ಈ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಅವರ ಕೊಡುಗೆಯನ್ನು ಪರಿಗಣಿಸಿ, ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಅವರ ಸೇವೆಯನ್ನು ವಿಶೇಷವಾಗಿ ಪ್ರಶಂಸಿಸಿತ್ತು.

    ಅಭಿನಂದನೆಗಳ ಮಹಾಪೂರ : ಅಪರಾಧ ತನಿಖಾ ಕ್ಷೇತ್ರದಲ್ಲಿನ ಕಾರ್ಯದಕ್ಷತೆ ಹಾಗೂ ವಿಶೇಷ ಕೊಡುಗೆಯನ್ನು ಪರಿಗಣಿಸಿ ರಾಜ್ಯ ಪೊಲೀಸ್ ಇಲಾಖೆಯು ಈ ಅತ್ಯುನ್ನತ ಗೌರವವನ್ನು ನೀಡಿದೆ.
    ಬೆಂಗಳೂರಿನಲ್ಲಿ ಚಿನ್ನದ ಪದಕ ಸ್ವೀಕರಿಸಿದ ದೀಪಕ್ ನಾಯ್ಕ ಅವರಿಗೆ ಪೊಲೀಸ್ ಇಲಾಖೆ, ಸಹೋದ್ಯೋಗಿಗಳು, ಪ್ರಮುಖ ಗಣ್ಯರು ಹಾಗೂ ಸಾರ್ವಜನಿಕ ವಲಯದಿಂದ ಶುಭಾಶಯ ಹಾಗೂ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

    About The Author

    error: Content is protected !!