ಕುಮಟಾ, ಜೂನ್ 17: ತಾಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ಸಂಸ್ಕೃತ ವಿದ್ಯಾರ್ಥಿಗಳಿಗೆ ಧಾರವಾಡದ ಶೇಷತಾರಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿ ಮೂಲದ ಡಾ. ರೇಣುಕಾದೇವಿ ಕುಚಿನಾಡ ಅವರು ಶಾಲಾ ಬ್ಯಾಗ್‌ಗಳನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಾಲೆಯ “ದೇವ ದೀಪಿಕಾ” – “ಸಂಸ್ಕೃತ ಮಂದಿರ”ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಂಸ್ಕೃತ ಅಧ್ಯಯನದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ವೇಳೆ ಕರ್ನಾಟಕ ರಣಧೀರರ ವೇದಿಕೆಯ ಕುಮಟಾ ತಾಲೂಕು ಘಟಕದ ಅಧ್ಯಕ್ಷ ಸಮೀರ್ ಮಿರ್ಜಾನ್ ಅವರು ಡಾ. ರೇಣುಕಾದೇವಿ ಅವರಿಗೆ “ಭುವನ ಭಾರತಿ” ಉಪಾಧಿಯ ಫಲಕ ನೀಡಿ ಗೌರವಿಸಿದರು.
ಶಾಲೆಯ ಮುಖ್ಯಾಧ್ಯಾಪಕ ಮಧುಕೇಶ್ವರ ನಾಯ್ಕ ಅವರು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಸಂಸ್ಕೃತ ಭಾಷೆಯ ಅಭಿವೃದ್ಧಿಗೆ ಡಾ. ರೇಣುಕಾದೇವಿ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿ ಅಭಿನಂದನಾ ಪತ್ರ ಸಲ್ಲಿಸಿದರು.
ಸಂಸ್ಕೃತ ಅಧ್ಯಾಪಕ ಮಂಜುನಾಥ ಗಾಂವ್ಕರ್ ಸ್ವಾಗತಿಸಿ ಮಾತನಾಡಿ, ಡಾ. ರೇಣುಕಾದೇವಿ ಅವರು ತಮ್ಮ ತಂದೆ-ತಾಯಿಯರ ಹೆಸರಿನಲ್ಲಿ ಸ್ಥಾಪಿಸಿರುವ ಶೇಷತಾರಾ ಪ್ರತಿಷ್ಠಾನದ ಮೂಲಕ ಪ್ರತಿ ವರ್ಷ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದು, ಇದುವರೆಗೆ 20 ಲಕ್ಷ ರೂ.ಗೂ ಅಧಿಕ ಸಹಾಯಧನ ವಿತರಿಸಿರುವುದನ್ನು ಸ್ಮರಿಸಿದರು. ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದ ಮನವಿಗೆ ಸ್ಪಂದಿಸಿ ಸಂಸ್ಕೃತ ವಿದ್ಯಾರ್ಥಿಗಳಿಗೆ ಬ್ಯಾಗ್‌ಗಳನ್ನು ನೀಡಿರುವುದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶೇಷತಾರಾ ಪ್ರತಿಷ್ಠಾನದ ಸಂಚಾಲಕರಾದ ಸುಭಾಷ್ಚಂದ್ರ ಜಾದವ್, ನರೇಂದ್ರ ಹಿತ್ತಲಮಕ್ಕಿ, ನಿತ್ಯಾನಂದ ಹಿತ್ತಲಮಕ್ಕಿ, ಸುಮಿತ್ರಾ ನಾಯಕ, ಕಲಾ ಹಿತ್ತಲಮಕ್ಕಿ, ಹೀರಾ ಹಿತ್ತಲಮಕ್ಕಿ, ಪುನೀತ್ ಕುಮಾರ್ ಸೇರಿದಂತೆ 36 ಸಂಸ್ಕೃತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

More Stories
ಹೊಸ್ಕೇರಿ–ಕಡಮೆ ಸರ್ಕಾರಿ ಶಾಲೆಗೆ ಸಂದರ್ಶನಾಧಿಕಾರಿಗಳ ಭೇಟಿ: ಶೈಕ್ಷಣಿಕ ಪ್ರಗತಿಗೆ ಮೆಚ್ಚುಗೆ
ಹಿರೇಗುತ್ತಿ ಹೈಸ್ಕೂಲ್ ವಿದ್ಯಾರ್ಥಿನಿ ಎನ್.ವಿ. ಇಂಪನಾ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ತೃತೀಯ ಸ್ಥಾನ
“ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ : ರವಿ ಎಚ್. ನಾಯಕ” 🌿🌍