ಹೊನ್ನಾವರ, ಜೂನ್ 17: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪ್ರಕೃತಿ ಸೌಂದರ್ಯ ಇದೀಗ ದೇಶದ ಪ್ರಮುಖ ಉದ್ಯಮಿಗಳ ಗಮನ ಸೆಳೆಯುತ್ತಿದೆ. ಖ್ಯಾತ ಉದ್ಯಮಿ Anand Mahindra ಅವರು ಹೊನ್ನಾವರದ ನೈಸರ್ಗಿಕ ವೈಭವವನ್ನು ಕೊಂಡಾಡಿದ್ದು, ಕರಾವಳಿಯ ಈ ಅಪರೂಪದ ತಾಣವನ್ನು “ಮುಚ್ಚಿಟ್ಟ ವಜ್ರ” ಹಾಗೂ “ಮಾಂತ್ರಿಕ ಭೂದೃಶ್ಯ” ಎಂದು ಬಣ್ಣಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರವಾಸದ ಅನುಭವ ಹಂಚಿಕೊಂಡಿರುವ ಅವರು, ಕಡಿಮೆ ಜನಸಂದಣಿ ಹೊಂದಿರುವ ಮತ್ತು ಇನ್ನೂ ಸಂಪೂರ್ಣವಾಗಿ ಅನ್ವೇಷಣೆಗೆ ಒಳಗಾಗದ ಪ್ರವಾಸಿ ತಾಣಗಳ ಪೈಕಿ ಹೊನ್ನಾವರ ವಿಶಿಷ್ಟ ಸ್ಥಾನ ಪಡೆದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇರಳದ ಬ್ಯಾಕ್‌ವಾಟರ್‌ಗಳಂತೆ ಹೊನ್ನಾವರದ ಹಿನ್ನೀರು ಪ್ರದೇಶಗಳು, ಕಾಂಡ್ಲಾ ಕಾಡುಗಳು ಹಾಗೂ ಅಂಕುಡೊಂಕಾದ ಜಲಮಾರ್ಗಗಳು ಪ್ರವಾಸಿಗರನ್ನು ಸೆಳೆಯುವ ಅಪಾರ ಸಾಮರ್ಥ್ಯ ಹೊಂದಿವೆ ಎಂದು ಅವರು ಉಲ್ಲೇಖಿಸಿದ್ದಾರೆ.
ವಿಶ್ವಪ್ರಸಿದ್ಧ Jog Falls ನಲ್ಲಿ ಅಬ್ಬರಿಸುವ ಶರಾವತಿ ನದಿ, ಹೊನ್ನಾವರದಲ್ಲಿ ಶಾಂತವಾಗಿ ಅರಬ್ಬಿ ಸಮುದ್ರ ಸೇರುವ ದೃಶ್ಯ ಮನಮೋಹಕವಾಗಿದೆ. ಜೊತೆಗೆ ಕರಾವಳಿಯನ್ನು ರಕ್ಷಿಸುವ ನೈಸರ್ಗಿಕ ವ್ಯವಸ್ಥೆಯಾದ ಕಾಂಡ್ಲಾ ಕಾಡುಗಳ ಪರಿಸರ ಮಹತ್ವವೂ ಅಪಾರವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹೊನ್ನಾವರದಲ್ಲಿ Sharavathi Backwater Boating, Apsarakonda Falls, ಕಾಂಡ್ಲವನ ಹಾಗೂ ಇಕೋ ಬೀಚ್‌ಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿವೆ. ಪ್ರವಾಸೋದ್ಯಮದ ಬೆಳವಣಿಗೆಯಿಂದ ಹೋಟೆಲ್ ಉದ್ಯಮ, ಫಾಸ್ಟ್‌ಫುಡ್ ಕೇಂದ್ರಗಳು ಹಾಗೂ ಸಣ್ಣ ವ್ಯಾಪಾರಸ್ಥರಿಗೆ ಉತ್ತಮ ಆದಾಯ ದೊರೆಯುತ್ತಿದೆ.
ಡಿಲೈಟ್ ಹೋಟೆಲ್ ಮಾಲೀಕ ರವೀಂದ್ರ ಗೌಡ ಮಾತನಾಡಿ, “ಕೆಲವು ವರ್ಷಗಳ ಹಿಂದೆ ಹೊನ್ನಾವರದಲ್ಲಿ ಬೆರಳೆಣಿಕೆಯಷ್ಟು ಹೋಟೆಲ್‌ಗಳಿದ್ದವು. ಇಂದು ಪ್ರವಾಸಿಗರ ಸಂಖ್ಯೆಯ ಹೆಚ್ಚಳದಿಂದ ಹೋಟೆಲ್ ಹಾಗೂ ಇತರೆ ವ್ಯಾಪಾರ ವಲಯಗಳು ಉತ್ತಮ ಬೆಳವಣಿಗೆ ಕಂಡಿವೆ” ಎಂದು ಹೇಳಿದರು.
ಆದರೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದರೂ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಶರಾವತಿ ಬೋಟಿಂಗ್ ಕೇಂದ್ರದಲ್ಲಿ ಸಮರ್ಪಕ ಟೋಕನ್ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಹಾಗೂ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ರಜೆ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆಯೂ ತೀವ್ರವಾಗುತ್ತಿದೆ.
ಶರಾವತಿ ನದಿ ತೀರದ ನಿವಾಸಿ ಗಜಾನನ ಅವರು, “ಬೋಟಿಂಗ್‌ನಿಂದ ಆದಾಯ ಹೆಚ್ಚಾದರೂ ಟ್ರಾಫಿಕ್, ಶಬ್ದ ಮಾಲಿನ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರದ ಮೇಲೆ ಒತ್ತಡ ಹೆಚ್ಚುತ್ತಿದೆ” ಎಂದು ಹೇಳಿದರು.
ಕುಮಟಾದ ಛಾಯಾಗ್ರಾಹಕ ಕೃಷ್ಣ ಗೌಡ ಅವರ ಪ್ರಕಾರ, ಶರಾವತಿ ಹಿನ್ನೀರು ಪ್ರದೇಶ, ಕಾಂಡ್ಲವನ, ಅಪ್ಸರಕೊಂಡ ಮತ್ತು ಇಕೋ ಬೀಚ್‌ಗಳ ಸೌಂದರ್ಯ ಛಾಯಾಗ್ರಹಣಕ್ಕೆ ಅತ್ಯಂತ ಸೂಕ್ತವಾಗಿದ್ದು, ರಾಜ್ಯ ಹಾಗೂ ನೆರೆ ರಾಜ್ಯಗಳಿಂದಲೂ ಛಾಯಾಗ್ರಾಹಕರು ಆಗಮಿಸುತ್ತಿದ್ದಾರೆ.
ಪ್ರವಾಸೋದ್ಯಮದ ಅಪಾರ ಸಾಧ್ಯತೆ ಹೊಂದಿರುವ ಹೊನ್ನಾವರಕ್ಕೆ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಪರಿಸರ ಸಂರಕ್ಷಣೆಗೆ ಒತ್ತು ನೀಡಿದರೆ, “ಮುಚ್ಚಿಟ್ಟ ವಜ್ರ” ಎಂದೇ ಗುರುತಿಸಲ್ಪಟ್ಟ ಈ ಕರಾವಳಿ ತಾಣವು ದೇಶದ ಪ್ರಮುಖ ಪ್ರವಾಸಿ ತಾಣಗಳ ಸಾಲಿನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

More Stories
ಕನ್ನಡ ನಾಡು ನುಡಿ ಅಭ್ಯುದಯಕ್ಕೆ ನಾವೆಲ್ಲರೂ ಕಂಕಣಬದ್ಧರಾಗಿರಬೇಕು: ತಹಸೀಲ್ದಾರ್ ಪ್ರವೀಣ ಕರಾಂಡೆ ಕರೆ
ಉತ್ತರ ಕನ್ನಡ ಇಂದಿಗೂ ‘ಉತ್ತರವಿಲ್ಲದ’ ಜಿಲ್ಲೆಯಾಗಿಯೇ ಉಳಿದಿದೆ: ಹಿರಿಯ ಪತ್ರಕರ್ತ ಜಿ.ಯು. ಭಟ್ ಕಳಕಳಿ
ಬನ್ನಂಜೆ ಚೈತನ್ಯದ ಕಥೆಯಾಗುಳಿಯಲಿ, ಮುಂದಿನ ತಲೆಮಾರುಗಳಿಗೆ ದಾರಿದೀಪವಾಗಲಿ: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ