ಕೂಡ್ಲಿಗಿ (ವಿಜಯನಗರ): ಮಾಜಿ ಉಪ ಸಭಾಪತಿಗಳು ಹಾಗೂ ಏಳನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ರಾಜ್ಯದ ಹಿರಿಯ ರಾಜಕಾರಣಿ, ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಕೂಡ್ಲಿಗಿ ಹಾಗೂ ಮೊಳಕಾಲ್ಮೂರು ಭಾಗದ ಕಾಂಗ್ರೆಸ್ ಧುರೀಣರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಕೂಡ್ಲಿಗಿ ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್ ಹಾಗೂ ಬಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಗುಂಡುಮುಣುಗು ತಿಪ್ಪೇಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋಗವು, ಕಲ್ಯಾಣ ಕರ್ನಾಟಕ ಭಾಗದ ಪರಿಶಿಷ್ಟ ಪಂಗಡ (ST) ಸಮುದಾಯದ ಅತ್ಯಂತ ಅನುಭವಿ ಹಿರಿಯ ಶಾಸಕರಾದ ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಿ ಗೌರವಿಸಬೇಕು ಎಂದು ಕೋರಿತು.
”ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಸಚಿವ ಸ್ಥಾನ ಅಗತ್ಯ”
ಇದೇ ಸಂದರ್ಭದಲ್ಲಿ ಮಾತನಾಡಿದ ಬಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ ಅವರು, “ಎನ್.ವೈ. ಗೋಪಾಲಕೃಷ್ಣ ಅವರು ಪರಿಶಿಷ್ಟ ಪಂಗಡ ಸಮುದಾಯದ ಕ್ರಿಯಾಶೀಲ ಮತ್ತು ಜನಾನುರಾಗಿ ನಾಯಕರಾಗಿದ್ದಾರೆ. ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ರಾಜ್ಯ ಕಂಡ ಅತ್ಯಂತ ಅನುಭವಿ ಮುತ್ಸದ್ದಿ. ಪ್ರತಿ ಬಾರಿಯೂ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ತಂದು ಅಭಿವೃದ್ಧಿಯ ಹರಿಕಾರ ಎನಿಸಿಕೊಂಡಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ ವಿಜಯನಗರ, ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆಗಳು ಸೇರಿದಂತೆ ಇಡೀ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಸಾಧ್ಯವಾಗುತ್ತದೆ. ಜೊತೆಗೆ ಈ ಭಾಗವನ್ನು ಕಾಂಗ್ರೆಸ್‌ನ ಮತ್ತಷ್ಟು ಭದ್ರಕೋಟೆಯನ್ನಾಗಿ ಮಾಡಲು ಸಹಕಾರಿಯಾಗಲಿದೆ,” ಎಂದರು.

ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಮಾತನಾಡಿ, “ಸರಳ ಸಜ್ಜನಿಕೆಯ ರಾಜಕಾರಣಿಯಾದ ಎನ್.ವೈ. ಗೋಪಾಲಕೃಷ್ಣ ಅವರು ಹಿಂದೆ ಉಪಸಭಾಪತಿಗಳಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಇಂತಹ ಹಿರಿಯರ ಅನುಭವದ ಲಾಭ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಹಾಗೂ ಪಕ್ಷದ ಏಳ್ಗೆಗೆ ಅತ್ಯಗತ್ಯವಾಗಿದೆ,” ಎಂದು ಸಿಎಂ ಗಮನ ಸೆಳೆದರು.
ಮಾಜಿ ಮುಖ್ಯಮಂತ್ರಿಗಳಿಗೂ ಮನವಿ
ಮುಖ್ಯಮಂತ್ರಿಗಳ ಭೇಟಿಯ ಬೆನ್ನಲ್ಲೇ ಕಾಂಗ್ರೆಸ್ ಧುರೀಣರ ನಿಯೋಗವು ಮಾಜಿ ಮುಖ್ಯಮಂತ್ರಿಗಳನ್ನೂ ಭೇಟಿಯಾಗಿ, ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವ ಪ್ರಕ್ರಿಯೆಗೆ ಬೆಂಬಲ ನೀಡಬೇಕೆಂದು ವಿನಂತಿಸಿತು. ಈ ಸಂದರ್ಭದಲ್ಲಿ ಹಲವು ಸಚಿವರು, ಶಾಸಕರು ಹಾಗೂ ಸಂಸದರು ಉಪಸ್ಥಿತರಿದ್ದರು.
ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಎಪಿಎಂಸಿ ಅಧ್ಯಕ್ಷರಾದ ಬೋಸಯ್ಯ, ನಿವೃತ್ತ ಶಿಕ್ಷಕ ತಳವಾರ ಶರಣಪ್ಪ, ನಿಂಬಳಗೇರೆ ಕಲ್ಲೇಶಪ್ಪ, ಗಾಣಗಟ್ಟೆ ಮಹಂತೇಶ, ಪಾಪಾನಾಯ್ಕ, ಬೊಮ್ಮಣ್ಣ, ಸಕಲಾಪುರದಹಟ್ಟಿ ಹರೀಶ, ಪಾಲಯ್ಯನಕೋಟೆ ಕಲ್ಲೇಶ, ಕುಪ್ಪನಕೇರಿ ಸಿದ್ದೇಶ, ಇಂಜಿನಿಯರ್ ಶರಣಪ್ಪ, ಯಂಬಳಿ ಮಂಜುನಾಥ್ ಹಾಗೂ ವೆಂಕಟೇಶ್ ಸೇರಿದಂತೆ ಹತ್ತಾರು ಪ್ರಮುಖ ಮುಖಂಡರು ನಿಯೋಗದಲ್ಲಿದ್ದರು.

More Stories
ಹಾಸ್ಟೆಲ್ಗಳು ಗುರುಕುಲ ಮಾದರಿಯಲ್ಲಿರಲಿ; ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ: ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಕಟ್ಟುನಿಟ್ಟಿನ ಸೂಚನೆ
ಊರಮ್ಮ ದೇವಿಗೆ ಚಿನ್ನದ ಮುಖ–ಕಿರೀಟ ಸಮರ್ಪಣೆ