June 23, 2026

ವಿದ್ಯುತ್ ವಲಯ ಖಾಸಗೀಕರಣ ವಿರೋಧಿಸಿ ತಹಶೀಲ್ದಾರರಿಗೆ ವಿವಿಧ ಸಂಘಟನೆಗಳಿಂದ ಮನವಿ

ಹೊನ್ನಾವರ: ರಾಜ್ಯದ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿ, ತಾಲೂಕಿನ ವಿವಿಧ ಪ್ರಮುಖ ಸಂಘಟನೆಗಳ ವತಿಯಿಂದ ಸೋಮವಾರ ರಾಜ್ಯ ಸರ್ಕಾರಕ್ಕೆ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ಖಾಸಗೀಕರಣದ ಕ್ರಮವನ್ನು ಖಂಡಿಸಿ ರೈತ ಸಂಘಟನೆ, ಹೊನ್ನಾವರ ಉಳಿಸಿ ಬೆಳೆಸಿ ಸಂಘಟನೆ, ಹೆಸ್ಕಾಂ ನಿವೃತ್ತ ನೌಕರರ ಸಂಘ, ವಿದ್ಯುತ್ ಗುತ್ತಿಗೆದಾರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಯುವ ಒಕ್ಕೂಟ, ದೇವರಾಜ ಅರಸು ವೇದಿಕೆ ಹಾಗೂ ಆಟೋ ಯೂನಿಯನ್ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಪಟ್ಟಣದ ಶರಾವತಿ ವೃತ್ತದ ಬಳಿ ಜಮಾಯಿಸಿದರು. ಖಾಸಗೀಕರಣದಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಉಂಟಾಗುವ ಅನಾಹುತ ಮತ್ತು ತೊಂದರೆಗಳ ಕುರಿತು ಜಾಗೃತಿ ಮೂಡಿಸಿದ ಪ್ರತಿಭಟನಾಕಾರರು, ನಂತರ ಅಲ್ಲಿಂದ ಮೆರವಣಿಗೆಯ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಹಸ್ತಾಂತರಿಸಿದರು.

ಯೋಜನೆಗಳು ಸ್ಥಗಿತಗೊಳ್ಳುವ ಆತಂಕ:

ಸಾರ್ವಜನಿಕ ಹಿತದೃಷ್ಟಿಯಿಂದ ಟಾಟಾ ಪವರ್ ಸೇರಿದಂತೆ ಯಾವುದೇ ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡುವುದನ್ನು ಸರ್ಕಾರ ತಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರಸ್ತುತ ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಹಾಗೂ ಹೆಸ್ಕಾಂ ಸಂಸ್ಥೆಗಳು ರಾಜ್ಯದಲ್ಲಿ ವಿದ್ಯುತ್ ವಿತರಣೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿವೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಹಾಗೂ ಗೃಹ ಜ್ಯೋತಿಯಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದು, ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿವೆ.
ಒಂದು ವೇಳೆ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಟಾಟಾ ಸಮೂಹದಂತಹ ಖಾಸಗಿ ಕಂಪನಿಗಳಿಗೆ ವಹಿಸಿದರೆ, ಭವಿಷ್ಯದಲ್ಲಿ ವಿದ್ಯುತ್ ದರ ಗಗನಕ್ಕೇರಲಿದೆ. ಅಷ್ಟೇ ಅಲ್ಲದೇ, ಬಡವರು ಮತ್ತು ರೈತರಿಗೆ ಸಿಗುತ್ತಿರುವ ಸರ್ಕಾರದ ವಿವಿಧ ಉಚಿತ ಯೋಜನೆಗಳು ಸ್ಥಗಿತಗೊಳ್ಳುವ ಭೀತಿ ಇದೆ. ಇದು ಹೆಸ್ಕಾಂ ವಿಭಾಗದಲ್ಲಿ ದುಡಿಯುತ್ತಿರುವ ಸಾವಿರಾರು ಸಿಬ್ಬಂದಿಗಳ ಉದ್ಯೋಗ ಭದ್ರತೆ ಹಾಗೂ ಸಾರ್ವಜನಿಕರ ಹಿತಾಸಕ್ತಿಗೆ ಮಾರಕವಾಗಲಿದ್ದು, ಖಾಸಗೀಕರಣದ ಯಾವುದೇ ನಿರ್ಧಾರವನ್ನು ಕೈ ಬಿಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹೊನ್ನಾವರ ಉಳಿಸಿ ಬೆಳೆಸಿ ಸಂಘಟನೆಯ ಅಧ್ಯಕ್ಷ ಜಿ.ಎನ್‌.ಗೌಡ, ದೇವರಾಜ ಅರಸು ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ, ಯುವ ಒಕ್ಕೂಟದ ಅಧ್ಯಕ್ಷ ವಿನಾಯಕ ನಾಯ್ಕ ಮೂಡ್ಕಣಿ, ಭಾರತೀಯ ಕಿಸಾನ್ ಸಂಘದ ಪ್ರಮುಖ ಎಂ.ಆರ್.ಹೆಗಡೆ, ಕರವೇ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ನಸರುಲ್ಲಾ, ಆಟೋ ಯೂನಿಯನ್‌ ಅಧ್ಯಕ್ಷ ಶಿವರಾಜ ಮೇಸ್ತ ಉಪಸ್ಥಿತರಿದ್ದರು.

ಅಲ್ಲದೇ ವಿದ್ಯುತ್ ಗುತ್ತಿಗೆದಾರರಾದ ಹೆನ್ರಿ ಲೀಮಾ, ಎಸ್.ಎಮ್. ನಾಯ್ಕ, ಎಸ್.ಕೆ.ಶೆಟ್ಟಿ, ಹರಿಶ್ಚಂದ್ರ ನಾಯ್ಕ, ಕೇಶವ ನಾಯ್ಕ ಬಳ್ಕೂರು, ನ್ಯಾಯವಾದಿ ವಿಕ್ರಂ ನಾಯ್ಕ, ಕರವೇ ಅಧ್ಯಕ್ಷ ಮಂಜುನಾಥ ಗೌಡ, ರೈತ ಸಂಘದ ಪ್ರಮುಖರಾದ ಗಣಪತಿ ಹೆಗಡೆ ಸೇರಿದಂತೆ ಅನೇಕರು ಭಾಗವಹಿಸಿದ್ದರು. ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!