June 24, 2026

ಹಿರೇಗುತ್ತಿ ಹೈಸ್ಕೂಲ್‌ನಲ್ಲಿ ಶಾಲಾ ಸಂಸತ್ತು ಚುನಾವಣೆ ಹಾಗೂ ಮಂತ್ರಿಮಂಡಲ ರಚನೆ

ಹಿರೇಗುತ್ತಿ: ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿನ ಸದಸ್ಯರ ಆಯ್ಕೆಯನ್ನು ನೈಜ ಚುನಾವಣಾ ಮಾದರಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಮುಖ್ಯಚುನಾವಣಾಧಿಕಾರಿಯಾಗಿ ಮುಖ್ಯಾಧ್ಯಾಪಕ ವಿಶ್ವನಾಥ ಬೇವಿನಕಟ್ಟಿ ಅವರ ಅಧಿಸೂಚನೆಯೊಂದಿಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು. ವಿದ್ಯಾರ್ಥಿಗಳು ತಮ್ಮ ನಾಮಪತ್ರಗಳನ್ನು ಸೂಚಕರ ಸಹಿಯೊಂದಿಗೆ ಚುನಾವಣಾಧಿಕಾರಿಗಳಾದ ನಾಗರಾಜ ಜಿ. ನಾಯಕ ಹಾಗೂ ಶ್ರೀಮತಿ ಜಾನಕಿ ಗೊಂಡ ಅವರಿಗೆ ಸಲ್ಲಿಸಿದರು. ಬಳಿಕ ನಾಮಪತ್ರ ಪರಿಶೀಲನೆ ಹಾಗೂ ಹಿಂಪಡೆಯುವ ಪ್ರಕ್ರಿಯೆಗಳು ನಡೆದವು.

ನೈಜ ಚುನಾವಣೆಯ ಅನುಭವ ಕಲ್ಪಿಸುವ ಉದ್ದೇಶದಿಂದ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದ್ದು, ಪ್ರಚಾರ ಕಾರ್ಯಕ್ಕೂ ಅವಕಾಶ ನೀಡಲಾಯಿತು. ಮತದಾನ ಪ್ರಕ್ರಿಯೆಯಲ್ಲಿ ಮತಗಟ್ಟೆ ಅಧಿಕಾರಿ, ಪಿ.ಆರ್.ಓ., ಎ.ಪಿ.ಆರ್.ಓ., ಡಿ ದರ್ಜೆ ಸಹಾಯಕರು ಹಾಗೂ ಆರಕ್ಷಕರ ಕರ್ತವ್ಯಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸಿದರು.

ಚಿಹ್ನೆ ಸಹಿತ ಮುದ್ರಿತ ಮತಪತ್ರಗಳು, ಮತದಾರರ ಪಟ್ಟಿ, ಮತದಾನ ಕೊಠಡಿ, ರಬ್ಬರ್ ಮೊಹರು, ಅಳಿಸಲಾಗದ ಶಾಹಿ ಸೇರಿದಂತೆ ವಿವಿಧ ಚುನಾವಣಾ ಸಾಮಗ್ರಿಗಳನ್ನು ಬಳಸಿ ಮತದಾನ ನಡೆಸಲಾಯಿತು. ನಂತರ ಮತಪತ್ರಗಳನ್ನು ಎಣಿಸಿ ಫಲಿತಾಂಶ ಪ್ರಕಟಿಸಲಾಯಿತು.

ಶಾಲೆಯ ಗಂಡು ಮಕ್ಕಳ ವಿದ್ಯಾರ್ಥಿ ಪ್ರತಿನಿಧಿಯಾಗಿ ವಿಘ್ನೇಶ್ವರ ವಾಮನ ಗೌಡ ಹಾಗೂ ಹೆಣ್ಣು ಮಕ್ಕಳ ವಿದ್ಯಾರ್ಥಿ ಪ್ರತಿನಿಧಿಯಾಗಿ ಭಾಗ್ಯಶ್ರೀ ನಾಗರಾಜ ಗೌಡ ಆಯ್ಕೆಯಾದರು. ಬಳಿಕ ವಿವಿಧ ವರ್ಗಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಿ, ಸಾಂಸ್ಕೃತಿಕ, ಕ್ರೀಡಾ, ಸ್ವಚ್ಛತಾ, ಆಹಾರ ಮತ್ತು ಆರೋಗ್ಯ, ಪ್ರವಾಸ ಮಂತ್ರಿ ಹಣಕಾಸು ಹಾಗೂ ಪ್ರಾರ್ಥನಾ ಮಂತ್ರಿಗಳನ್ನು ಆಯ್ಕೆ ಮಾಡುವ ಮೂಲಕ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು.

ಶಾಲೆಯಲ್ಲಿ ಶಿಸ್ತುಬದ್ಧ ಹಾಗೂ ಮಾದರಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಶ್ರಮಿಸಿದ ಶಿಕ್ಷಕರನ್ನು ಹಾಗೂ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳನ್ನು ಮುಖ್ಯಾಧ್ಯಾಪಕರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಬಾಲಚಂದ್ರ ಅಡಿಗೋಣ, ಮಹಾದೇವ ಗೌಡ, ಎನ್. ರಾಮು ಹಿರೇಗುತ್ತಿ, ಶ್ರೀಮತಿ ಶಿಲ್ಪಾ ನಾಯಕ, ಭರತ್ ಭಟ್, ಮದನ ನಾಯಕ, ಮಹಿಮಾ ಗೌಡ, ಗೋಪಾಲಕೃಷ್ಣ ಗುನಗಾ ಹಾಗೂ ಗೋವಿಂದ ನಾಯ್ಕ ಸಹಕರಿಸಿದರು.

ವರದಿ: ಎನ್. ರಾಮು ಹಿರೇಗುತ್ತಿ

About The Author

error: Content is protected !!