ಹೊನ್ನಾವರ: ದೇಶ-ವಿದೇಶಗಳಲ್ಲಿ ಅಪಾರ ಶಿಷ್ಯಬಳಗವನ್ನು ಹೊಂದಿರುವ ಖ್ಯಾತ ತಬಲಾ ಕಲಾವಿದ ಗೋಪಾಲಕೃಷ್ಣ ಗೋವಿಂದ ಹೆಗಡೆ ಕಲ್ಭಾಗ (ಗೋಪು ಹೆಗಡೆ) ಅವರ ಷಷ್ಠಬ್ಧಿ (60 ವರ್ಷ ತುಂಬಿದ) ನಿಮಿತ್ತ ಜೂನ್ 27ರ ಶನಿವಾರದಂದು ಪ್ರಭಾತನಗರದ ಮೂಡಗಣಪತಿ ಸಭಾಭವನದಲ್ಲಿ ಹಾರ್ದಿಕ ಅಭಿನಂದನಾ ಸಮಾರಂಭ ಹಾಗೂ “ತಾಲ ಗೋಪಾಲ” ಅಭಿನಂದನಾ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಕವಲಕ್ಕಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಅವರು ವಿವರಗಳನ್ನು ನೀಡಿದರು.

ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ದಿವ್ಯ ಸಾನಿಧ್ಯ:
ಗೋಪು ಹೆಗಡೆಯವರು ದೇಶದ ಪ್ರಸಿದ್ಧ ಹಿರಿಯ ಕಲಾವಿದರ ಜೊತೆ ತಬಲಾ ಸಾಥ್ ನೀಡಿದ್ದಲ್ಲದೆ, ಎಸ್ಡಿಎಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ತಬಲಾ ಶಿಕ್ಷಣ ಬೋಧಿಸಿದ್ದಾರೆ. ಅವರ ಈ ಸಾಧನೆಯನ್ನು ಗೌರವಿಸುವ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ‘ತಾಲ – ಮಾನ’ ಕಾರ್ಯಕ್ರಮಕ್ಕೆ ಶ್ರೀ ರಾಮಚಂದ್ರಪುರ ಮಠದ ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.
ಗಣ್ಯರ ಉಪಸ್ಥಿತಿ:
ಸಾಮವೇದ ವಿದ್ವಾಂಸರಾದ ವೇ. ಸುಬ್ರಹ್ಮಣ್ಯ ಭಟ್ ಉಂಚಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶ್ರೀಕುಮಾರ ಗ್ರೂಪ್ನ ವೆಂಕಟ್ರಮಣ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಹಿಂದುಸ್ಥಾನಿ ಗಾಯಕರಾದ ಪಂಡಿತ ಗಣಪತಿ ಭಟ್ ಹಾಸಣಗಿ, ಪಂಡಿತ ಪರಮೇಶ್ವರ ಹೆಗಡೆ ಹಾಗೂ ಪತ್ರಕರ್ತ ಬಿ. ಗಣಪತಿ ಆಗಮಿಸಲಿದ್ದಾರೆ. ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಮತ್ತು ಶಿವಾನಿ ಕೃಷ್ಣಮೂರ್ತಿ ಭಟ್ ಉಪಸ್ಥಿತರಿರಲಿದ್ದು, ಮೋಹನ ಹೆಗಡೆ ಹೆರವಟ್ಟಾ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ದಿನವಿಡೀ ಸಾಂಸ್ಕೃತಿಕ ವೈಭವ:
ಮುಂಜಾನೆಯಿಂದ ಸಂಜೆಯವರೆಗೆ ಗೋಪು ಹೆಗಡೆಯವರ ಹಿರಿಯ ಹಾಗೂ ಕಿರಿಯ ಶಿಷ್ಯರಿಂದ ತಬಲಾ ವಾದನ ಮತ್ತು ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ಸಭಾ ಕಾರ್ಯಕ್ರಮದ ನಂತರ ಗೋಪಾಲಕೃಷ್ಣ ಹೆಗಡೆಯವರ ಖ್ಯಾತ ಸಂಯೋಜನೆಯ ‘ಲಯ-ಲಾಸ್ಯ’ ಕಾರ್ಯಕ್ರಮ, ಸಾಮವೇದ ಮತ್ತು ಸಂಗೀತದ ಪ್ರಾತ್ಯಕ್ಷಿಕೆ ಹಾಗೂ ಜಿಲ್ಲೆಯ ಪ್ರಸಿದ್ಧ ಗಾಯಕರಿಂದ ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನೆರವೇರಲಿವೆ. ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಊಟೋಪಹಾರದ ವ್ಯವಸ್ಥೆ ಮಾಡಲಾಗಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಡಾ. ಎಂ.ಜಿ. ಹೆಗಡೆ, ಗೌರವ ಕಾರ್ಯದರ್ಶಿ ಜಿ.ಕೆ. ಭಟ್ ವಂದೂರು, ಖಜಾಂಚಿ ಉದಯ ಹೆಗಡೆ ಮುಡಾರೆ ಹಾಗೂ ಪ್ರಮುಖರಾದ ಜಿ.ಕೆ. ಹೆಗಡೆ ಹರಿಕೇರಿ, ಡಾ. ಸತೀಶ ಭಟ್, ಸುಬ್ರಹ್ಮಣ್ಯ ಹೆಗಡೆ, ವಿನಾಯಕ ಬೆಟಕುರು, ಮಧು ಕುಡಳಾಕರ್, ವಿನಾಯಕ ಹರಡಸೆ, ಸುಬ್ರಹ್ಮಣ್ಯ ಹರಿಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

More Stories
ಅಗ್ನಿವೀರ್ ಹುದ್ದೆಗೆ ಆಯ್ಕೆಯಾದ ನಗರೆಯ ಯುವಕ ವಿನಯ ನಾಯ್ಕಗೆ ಗೌರವ ಪೂರ್ವಕ ಸನ್ಮಾನ
ಸರ್ಕಾರಿ ಶಾಲೆಗಳ ಬೆಳವಣಿಗೆಗೆ ದಾನಿಗಳ ಸಹಕಾರ ಅಗತ್ಯ; ಬಿಇಒ ಜಯಶ್ರೀ ನಾಯ್ಕ
ಹೊನ್ನಾವರ ತಾಲೂಕು ಆಸ್ಪತ್ರೆ: ವರ್ಗಾವಣೆಗೊಂಡ ವೈದ್ಯರು, ಸಿಬ್ಬಂದಿಗಳಿಗೆ ಆತ್ಮೀಯ ಬೀಳ್ಕೊಡುಗೆ