June 26, 2026

ಕೆ.ಆರ್.ಪೇಟೆ: ಪರೋಪಕಾರ, ಸೇವಾ ಮನೋಭಾವನೆ ವಿದ್ಯಾರ್ಥಿಗಳ ಜೀವನದ ಉಸಿರಾಗಲಿ; ಶಿಕ್ಷಣ ತಜ್ಞೆ ಜೆ. ಉಮಾದೇವಿ

ಕೃಷ್ಣರಾಜಪೇಟೆ: ವಿದ್ಯಾರ್ಥಿಗಳು ಬಾಲ್ಯದಿಂದಲೇ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು. ಪರೋಪಕಾರ ಗುಣಗಳು ಹಾಗೂ ಸೇವಾ ಮನೋಭಾವನೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಉಸಿರಾಗಬೇಕು ಎಂದು ಕನಕಪುರದ ಹಾರೋಹಳ್ಳಿಯ ಗ್ರೀನ್ ಬೆಲ್ ಪ್ರೌಢಶಾಲೆಯ ಪ್ರಾಂಶುಪಾಲರಾದ, ಶಿಕ್ಷಣ ತಜ್ಞೆ ಜೆ. ಉಮಾದೇವಿ ಕರೆ ನೀಡಿದರು.


ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಸ್ಕೂಲ್ ಆಫ್ ಇಂಡಿಯಾ ಶಾಲೆಯ ವಿದ್ಯಾರ್ಥಿಗಳ ನಾಯಕತ್ವ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.


ಹುಟ್ಟಿದ ಮಣ್ಣಿನ ಋಣ ತೀರಿಸಿ:
ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಸತ್ಪ್ರಜೆಗಳು. ಹೀಗಾಗಿ ಮಕ್ಕಳು ಬಾಲ್ಯದಿಂದಲೇ ಶಿಸ್ತು, ಸಂಯಮವನ್ನು ಬೆಳೆಸಿಕೊಂಡು ಭವಿಷ್ಯದ ನಾಯಕರಾಗಿ ಹೊರಹೊಮ್ಮಬೇಕು. ಸಮಾಜದಲ್ಲಿನ ಬಡವರು, ನೊಂದವರು ಹಾಗೂ ದನಿಯಿಲ್ಲದ ನಿರ್ಗತಿಕರಿಗೆ ಕೈಲಾದ ಸಹಾಯ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ವೃದ್ಧಿಸಿಕೊಳ್ಳಬೇಕು. ‘ನಾನು, ನನ್ನದು’ ಎಂಬ ಸ್ವಾರ್ಥ ಬಿಟ್ಟು, ‘ಸಮಾಜಕ್ಕಾಗಿ ನಾವು’ ಎಂಬ ವಿಶಾಲ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಮಹನೀಯರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಮೊಬೈಲ್ ಮೋಹದಿಂದ ದೂರವಿರಿ:
ವಿದ್ಯಾರ್ಥಿ ಜೀವನವು ಅತ್ಯಂತ ಅಮೂಲ್ಯವಾದದ್ದು. ಕಲಿಕೆಯ ಸಂದರ್ಭದಲ್ಲಿ ಮಕ್ಕಳು ತಮ್ಮ ಮನಸ್ಸನ್ನು ಅತ್ತಿತ್ತ ಹರಿಯಬಿಡದೆ, ಮೊಬೈಲ್ ಫೋನಿನ ಮೋಹಕ್ಕೆ ಒಳಗಾಗದೆ ಏಕಾಗ್ರತೆಯಿಂದ ಶಿಕ್ಷಣ ಕಲಿಯಬೇಕು. ಜ್ಞಾನ ವಿಕಾಸಗೊಳಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಅವರು ಕಿವಿಮಾತು ಹೇಳಿದರು.
ಇದೇ ವೇಳೆ ಶಾಲೆಯ ಸಾಧನೆಯನ್ನು ಶ್ಲಾಘಿಸಿದ ಅವರು, “ಸ್ಕೂಲ್ ಆಫ್ ಇಂಡಿಯಾ ಶಾಲೆಯು ಮಂಡ್ಯ ಜಿಲ್ಲೆಯಲ್ಲಿಯೇ ಅತ್ಯುತ್ತಮ ಶಾಲೆಯಾಗಿ ಹೊರಹೊಮ್ಮಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ, ಶೇ. 100 ರಷ್ಟು ಫಲಿತಾಂಶ ದಾಖಲಿಸುತ್ತಿರುವುದು ಹೆಮ್ಮೆಯ ವಿಚಾರ. ರಾಜ್ಯಸಭೆಯ ಮಾಜಿ ಉಪಸಭಾಪತಿ ಹಾಗೂ ಕೇಂದ್ರ ಮಾಜಿ ಸಚಿವರಾದ ಕೆ. ರೆಹಮಾನ್ ಖಾನ್ ಅವರು ತಮ್ಮ ಹುಟ್ಟೂರನ್ನು ಮರೆಯದೆ, ಇಲ್ಲಿನ ಮಕ್ಕಳ ಶೈಕ್ಷಣಿಕ ವಿಕಾಸಕ್ಕಾಗಿ ಇಂತಹ ಅಂತರರಾಷ್ಟ್ರೀಯ ಮಟ್ಟದ ಶಾಲೆಯನ್ನು ಆರಂಭಿಸಿರುವುದು ಅವರ ಜನ್ಮಭೂಮಿಯ ಮೇಲಿನ ಅಭಿಮಾನವನ್ನು ತೋರಿಸುತ್ತದೆ” ಎಂದರು.


ಮಕ್ಕಳ ಸಮಗ್ರ ವಿಕಸನಕ್ಕೆ ಶಾಲೆಯ ಬದ್ಧತೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದ ಶಾಲೆಯ ಪ್ರಾಂಶುಪಾಲರಾದ ಶೈನಿ ಮೇರಿ ಡಯಾಸ್ ಮಾತನಾಡಿ, “ನಮ್ಮ ಶಾಲೆಯು ಗುಣಮಟ್ಟದ ಶಿಕ್ಷಣ ಹಾಗೂ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಪೋಷಕರ ವಿಶ್ವಾಸ ಗಳಿಸಿದೆ. ಇಂದು ಆಯ್ಕೆಯಾಗಿರುವ ವಿದ್ಯಾರ್ಥಿ ನಾಯಕರು ಶಿಸ್ತುಬದ್ಧವಾಗಿ ತಮ್ಮ ಜವಾಬ್ದಾರಿ ನಿಭಾಯಿಸಬೇಕು. ವಿದ್ಯಾರ್ಥಿಗಳು ಶ್ರದ್ಧಾ ಭಕ್ತಿಯಿಂದ ಕಲಿತು ಗುರಿ ಸಾಧಿಸಲು ಬೇಕಾದ ಎಲ್ಲಾ ಮಾರ್ಗದರ್ಶನವನ್ನು ನಮ್ಮ ಶಿಕ್ಷಕ ವೃಂದವು ಬದ್ಧತೆಯಿಂದ ನೀಡುತ್ತಿದೆ” ಎಂದು ಹೇಳಿದರು.


ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ:
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಆಕರ್ಷಕ ಪಥಸಂಚಲನ (ಮಾರ್ಚ್ ಪಾಸ್ಟ್) ಹಾಗೂ ವಿದ್ಯಾರ್ಥಿನಿಯರು ಪ್ರದರ್ಶಿಸಿದ ಭರತನಾಟ್ಯವು ನೆರೆದಿದ್ದ ಪೋಷಕರು ಹಾಗೂ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ವರದಿ: ಡಾ. ಕೆ.ಆರ್. ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!