July 15, 2026

ಭಟ್ಕಳದ ಶ್ರೀ ಗುರು ವಿದ್ಯಾಧೀರಾಜ ಪಿಯು ಕಾಲೇಜಿನಲ್ಲಿ CA ಫೌಂಡೇಶನ್ ಮತ್ತು CS ಪ್ರವೇಶ ಪರೀಕ್ಷೆ ತರಬೇತಿ ಕಾರ್ಯಕ್ರಮ ಉದ್ಘಾಟನೆ

  • ಉಡುಪಿಯ ‘ವೀರೀಚ್ ಅಕಾಡೆಮಿ’ ಸಹಯೋಗದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಉನ್ನತ ವೃತ್ತಿಪರ ಅವಕಾಶ

ಭಟ್ಕಳ: ವಾಣಿಜ್ಯ {Commerce }ಕ್ಷೇತ್ರದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉನ್ನತ ವೃತ್ತಿಪರ ಅವಕಾಶಗಳನ್ನು ಕಲ್ಪಿಸುವ ಮಹತ್ವಾಕಾಂಕ್ಷೆಯ ಹೆಜ್ಜೆಯಾಗಿ, ಇಲ್ಲಿನ ಭಟ್ಕಳ ಎಜುಕೇಶನ್ ಟ್ರಸ್ಟ್ ಸಂಸ್ಥೆಯ ‘ಶ್ರೀ ಗುರು ವಿದ್ಯಾಧೀರಾಜ ದಿ ನ್ಯೂ ಇಂಗ್ಲಿಷ್ ಪದವಿಪೂರ್ವ ಮಹಾವಿದ್ಯಾಲಯ’ದಲ್ಲಿ ಉಡುಪಿಯ ಪ್ರಸಿದ್ಧ ‘ವೀರೀಚ್ ಅಕಾಡೆಮಿ’ (WeReach Academy) ಸಹಯೋಗದೊಂದಿಗೆ CA ಫೌಂಡೇಶನ್ ಮತ್ತು CS ಪ್ರವೇಶ ಪರೀಕ್ಷೆಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಭಟ್ಕಳ ಎಜುಕೇಶನ್ ಟ್ರಸ್ಟ್ನ ಟ್ರಸ್ಟಿ ಮ್ಯಾನೇಜರ್ ಶ್ರೀ ರಾಜೇಶ್ ನಾಯಕ ಅವರು ಮಾತನಾಡಿ, “ವಿದ್ಯಾರ್ಥಿಗಳು ಪಿಯುಸಿ ಹಂತದಲ್ಲಿಯೇ ವೃತ್ತಿಪರ ಶಿಕ್ಷಣದತ್ತ ಹೆಜ್ಜೆಯಿಡಲು ಸೂಕ್ತ ಮಾರ್ಗದರ್ಶನ ನೀಡುವ ಉದಾತ್ತ ಉದ್ದೇಶದಿಂದ ಈ ವಿಶೇಷ ತರಬೇತಿ ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯಲ್ಲಿಯೇ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಇದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು,” ಎಂದು ಕರೆ ನೀಡಿದರು.

ದೇಶ-ವಿದೇಶಗಳಲ್ಲಿ ಅತ್ಯುತ್ತಮ ಉದ್ಯೋಗಾವಕಾಶ: ಶ್ರೀಧರ ಶಾನಭಾಗ್
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಟ್ಕಳ ಎಜುಕೇಶನ್ ಟ್ರಸ್ಟ್ನ ಟ್ರಸ್ಟಿ ಶ್ರೀ ಶ್ರೀಧರ ಶಾನಭಾಗ್ ಅವರು ಮಾತನಾಡಿ, “ಇಂದಿನ ತೀವ್ರ ಸ್ಪರ್ಧಾತ್ಮಕ ಯುಗದಲ್ಲಿ ಸಿಎ (CA) ಹಾಗೂ ಸಿಎಸ್ (CS) ನಂತಹ ಪ್ರತಿಷ್ಠಿತ ವೃತ್ತಿಪರ ಕೋರ್ಸ್ಗಳು ವಿದ್ಯಾರ್ಥಿಗಳಿಗೆ ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಅತ್ಯುತ್ತಮ ಉದ್ಯೋಗ ಮತ್ತು ಉನ್ನತ ನಾಯಕತ್ವದ ಅವಕಾಶಗಳನ್ನು ಒದಗಿಸಿಕೊಡುತ್ತವೆ,” ಎಂದು ತಿಳಿಸಿದರು.

ಭಟ್ಕಳದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಥಳೀಯ ತರಬೇತಿ: ಸಿ.ಎಸ್. ಸಂತೋಷ್ ಪ್ರಭು
ಸಭೆಯನ್ನುದ್ದೇಶಿಸಿ ಮಾತನಾಡಿದ ವೀರೀಚ್ ಅಕಾಡೆಮಿಯ ಸಂಸ್ಥಾಪಕರಾದ ಸಿ.ಎಸ್. ಸಂತೋಷ್ ಪ್ರಭು ಅವರು, “ಭಟ್ಕಳದ ವಿದ್ಯಾರ್ಥಿಗಳು ಸಿಎ ಫೌಂಡೇಶನ್ ಮತ್ತು ಸಿಎಸ್ ಪ್ರವೇಶ ಪರೀಕ್ಷೆಯ ತರಬೇತಿಗಾಗಿ ಉಡುಪಿಗೆ ಬಂದು ಹಾಸ್ಟೆಲ್ ಅಥವಾ ರೂಮ್ ಮಾಡಿಕೊಂಡು ಪಡುತ್ತಿದ್ದ ಕಷ್ಟಗಳನ್ನು ತಪ್ಪಿಸಲು ಕಾಲೇಜಿನ ಆಡಳಿತ ಮಂಡಳಿಯು ಈ ಶ್ಲಾಘನೀಯ ಪ್ರಯತ್ನ ಮಾಡಿದೆ. ಸ್ಥಳೀಯವಾಗಿಯೇ ಸಿಗುತ್ತಿರುವ ಈ ಸುವರ್ಣಾವಕಾಶವನ್ನು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು,” ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ವೀರೇಂದ್ರ ವಿ. ಶಾನಭಾಗ್ ಅವರು ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿದರು. ಉಪನ್ಯಾಸಕಿ ಕು. ಸಂಕಲ್ಪ ಕಾರ್ಯಕ್ರಮ ನಿರೂಪಿಸಿದರೆ, ವಿದ್ಯಾರ್ಥಿನಿ ವಿಹಾ ವಿ. ಶಾನಭಾಗ್ ಮತ್ತು ಸಂಗಡಿಗರು ಪ್ರಾರ್ಥನೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

error: Content is protected !!