July 15, 2026

ಹೆದ್ದಾರಿ ಅಪಘಾತಕ್ಕೆ ಸ್ಕೂಟಿ ಸವಾರ ಬಲಿ: ಅವೈಜ್ಞಾನಿಕ ವಿನ್ಯಾಸ ಆರೋಪಿಸಿ ಭಟ್ಕಳದಲ್ಲಿ ಸಾರ್ವಜನಿಕರ ಆಕ್ರೋಶ, ಪ್ರತಿಭಟನೆ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ–66ರ ಕಾಯ್ಕಿಣಿ ಗ್ರಾಮ ಪಂಚಾಯಿತಿ ಕ್ರಾಸ್ ಸಮೀಪ ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ಲಾರಿ–ಸ್ಕೂಟಿ ಅಪಘಾತದಲ್ಲಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆದ್ದಾರಿ ಕಾಮಗಾರಿಯ ಅವೈಜ್ಞಾನಿಕ ವಿನ್ಯಾಸವೇ ಈ ಸರಣಿ ಅಪಘಾತಗಳಿಗೆ ಕಾರಣ ಎಂದು ಆರೋಪಿಸಿ ಆಕ್ರೋಶಗೊಂಡ ಸ್ಥಳೀಯರು ಹೆದ್ದಾರಿ ತಡೆದು ತೀವ್ರ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ತಾಲೂಕಿನ ತೆರ್ನಮಕ್ಕಿ ಸಭಾತಿ ನಿವಾಸಿ, ಕಿರಾಣಿ ಅಂಗಡಿ ಮಾಲೀಕರಾದ ಕೃಷ್ಣ ಶನಿಯಾರ್ ನಾಯ್ಕ (56) ಮೃತಪಟ್ಟ ದುರ್ದೈವಿ.

ಘಟನೆಯ ವಿವರ:

ಪೊಲೀಸರ ಮಾಹಿತಿ ಪ್ರಕಾರ, ಭಟ್ಕಳದಿಂದ ಮುರ್ಡೇಶ್ವರದತ್ತ ತೆರಳುತ್ತಿದ್ದ ಲಾರಿಯನ್ನು ಚಾಲಕ ರವಿ ವೀರಸ್ವಾಮಿ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದಿದ್ದ ಎನ್ನಲಾಗಿದೆ. ಕಾಯ್ಕಿಣಿ ಗ್ರಾಮ ಪಂಚಾಯಿತಿ ಕ್ರಾಸ್ ಬಳಿ ಮುರ್ಡೇಶ್ವರ ಕಡೆಯಿಂದ ತೆರ್ನಮಕ್ಕಿ ಕಡೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಕೃಷ್ಣ ಶನಿಯಾರ್ ನಾಯ್ಕ ಅವರ ವಾಹನಕ್ಕೆ ಲಾರಿ ಜೋರಾಗಿ ಡಿಕ್ಕಿ ಹೊಡೆದಿದೆ.


ಡಿಕ್ಕಿಯ ರಭಸಕ್ಕೆ ಸ್ಕೂಟಿ ಲಾರಿಯೊಂದಿಗೆ ಡಿವೈಡರ್ ಮೇಲೆ ಹತ್ತಿ, ಲಾರಿಯ ಅಡಿಯಲ್ಲಿ ಸಿಲುಕಿಕೊಂಡಿದೆ. ಅಪಘಾತದ ತೀವ್ರತೆಗೆ ತಲೆಗೆ ಗಂಭೀರ ಗಾಯಗಳಾದ ಕೃಷ್ಣ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಮೃತರ ಸಹೋದರ ಹಾಗೂ ಮಾವಳ್ಳಿ–1 ಗ್ರಾಮ ಪಂಚಾಯಿತಿಯ ಗ್ರಾಮ ಸಹಾಯಕ ಬಾಬು ಶನಿಯಾರ್ ನಾಯ್ಕ ಅವರು ಮುರ್ಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಲಾರಿ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

ಹೆದ್ದಾರಿ ವಿನ್ಯಾಸದ ವಿರುದ್ಧ ಜನಾಕ್ರೋಶ:

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸ್ಥಳೀಯರು ಸ್ಥಳಕ್ಕೆ ಧಾವಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ–66ರ ನಾಲ್ಕು ಪಥದ ಕಾಮಗಾರಿಯ ಅವೈಜ್ಞಾನಿಕ ಮತ್ತು ಕಳಪೆ ವಿನ್ಯಾಸದಿಂದಾಗಿ ಬಸ್ತಿ ಜಂಕ್ಷನ್ ಪ್ರಾಣಾಂತಿಕ ಅಪಘಾತ ವಲಯವಾಗಿ (ಬ್ಲ್ಯಾಕ್ ಸ್ಪಾಟ್) ಪರಿಣಮಿಸಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ಕಾಮಗಾರಿ ನಿರ್ವಹಿಸುತ್ತಿರುವ ಐಆರ್‌ಬಿ (IRB) ಸಂಸ್ಥೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸೂಕ್ತ ಭರವಸೆ ನೀಡುವವರೆಗೂ ಮೃತದೇಹ ಹಾಗೂ ಸ್ಕೂಟಿಯನ್ನು ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಹೆದ್ದಾರಿ ತಡೆ ನಡೆಸಿದರು.

ಸ್ಥಳಕ್ಕೆ ಅಧಿಕಾರಿಗಳ ಭೇಟಿ, ಭರವಸೆ:

ವಿಷಯ ತಿಳಿಯುತ್ತಿದ್ದಂತೆ ಭಟ್ಕಳ ಸಹಾಯಕ ಆಯುಕ್ತರಾದ ಜಿ. ಮಹೇಶ್, ಡಿವೈಎಸ್‌ಪಿ ಬಿ. ಗಿರೀಶ್ ಹಾಗೂ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಮನವೊಲಿಸಲು ಯತ್ನಿಸಿತು. ತದನಂತರ ಐಆರ್‌ಬಿ ಸಂಸ್ಥೆಯ ಎಂಜಿನಿಯರ್ ಸ್ಥಳಕ್ಕೆ ಆಗಮಿಸಿ, ಜಂಕ್ಷನ್‌ನಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ತಕ್ಷಣವೇ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಸ್ಥಳೀಯರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಬಳಿಕ ಲಾರಿಯಡಿ ಸಿಲುಕಿದ್ದ ಮೃತದೇಹವನ್ನು ಕ್ರೇನ್ ಮೂಲಕ ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಮುರ್ಡೇಶ್ವರ ಪಿಎಸ್‌ಐ ಹನುಮಂತ ಬಿರಾದಾರ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

About The Author

error: Content is protected !!