August 22, 2026

ಭಟ್ಕಳದಲ್ಲಿ ರಾಷ್ಟ್ರಪ್ರೇಮದ ಮೆರವಣಿಗೆ: ಬಿಜೆಪಿ ವತಿಯಿಂದ ಬೈಕ್ ರ‍್ಯಾಲಿ; ಗುರುಸುಧೀಂದ್ರ ಕಾಲೇಜು ವಿದ್ಯಾರ್ಥಿಗಳಿಂದ ಭವ್ಯ ‘ತಿರಂಗಾ ಯಾತ್ರೆ’

ಭಟ್ಕಳ: ದೇಶದ 80ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಪೂರ್ವಭಾವಿಯಾಗಿ ಭಟ್ಕಳ ತಾಲೂಕಿನಾದ್ಯಂತ ‘ಹರ್ ಘರ್ ತಿರಂಗಾ’ ಅಭಿಯಾನದ ಜಾಗೃತಿ ಅಲೆ ಎದ್ದಿದೆ. ಒಂದೆಡೆ ಬಿಜೆಪಿ ಮಂಡಳದಿಂದ ಬೈಕ್ ರ‍್ಯಾಲಿ ನಡೆದರೆ, ಇನ್ನೊಂದೆಡೆ ಪ್ರತಿಷ್ಠಿತ ಶ್ರೀ ಗುರುಸುಧೀಂದ್ರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ದೇಶಭಕ್ತ ಬಂಧುಗಳಿಂದ ಭವ್ಯ ‘ತಿರಂಗಾ ಯಾತ್ರೆ’ ಜರುಗಿತು.

ಬಿಜೆಪಿ ವತಿಯಿಂದ ಬೈಕ್ ರ‍್ಯಾಲಿ:

ಪಟ್ಟಣದಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನದ ಜಾಗೃತಿ ಮೂಡಿಸುವ ಉದ್ದೇಶದಿಂದ ಭಟ್ಕಳ ಬಿಜೆಪಿ ಮಂಡಳದ ವತಿಯಿಂದ ಬುಧವಾರ ಸಂಜೆ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ಚೆನ್ನಪಟ್ಟಣದ ಶ್ರೀ ಹನುಮಂತ ದೇವಸ್ಥಾನದ ಆವರಣದಿಂದ ರ‍್ಯಾಲಿಗೆ ಚಾಲನೆ ನೀಡಲಾಯಿತು.

“ತ್ರಿವರ್ಣ ಧ್ವಜವು ದೇಶದ ಪ್ರತಿಯೊಬ್ಬ ನಾಗರಿಕನ ಹೆಮ್ಮೆ ಮತ್ತು ರಾಷ್ಟ್ರಾಭಿಮಾನದ ಪ್ರತೀಕ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಪ್ರತಿಯೊಂದು ಮನೆಯಲ್ಲೂ ಸ್ವಾತಂತ್ರ್ಯೋತ್ಸವವನ್ನು ಹಬ್ಬದಂತೆ ಸಂಭ್ರಮದಿಂದ ಆಚರಿಸಬೇಕು.” ಎಂದು ಮಾಜಿ ಶಾಸಕ ಸುನೀಲ ನಾಯ್ಕ ಹೇಳಿದರು.

“ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ದೇಶದ ಜನರು ಹೇಗೆ ಒಗ್ಗಟ್ಟಿನಿಂದ ಹೋರಾಡಿದ್ದರೊ, ಅದೇ ರೀತಿಯಲ್ಲಿ ಈ ಆಚರಣೆಯೂ ಮನೆ ಮನೆಗಳ ಹಬ್ಬವಾಗಿ ರೂಪುಗೊಳ್ಳಬೇಕು. ಯುವಜನತೆ ದೇಶದ ಇತಿಹಾಸ ಹಾಗೂ ಸ್ವಾತಂತ್ರ್ಯದ ಮಹತ್ವವನ್ನು ಅರಿತುಕೊಳ್ಳಬೇಕು.”ಎಂದು ಮಾಜಿ ಸಚಿವ ಶಿವಾನಂದ ನಾಯ್ಕ ಹೇಳಿದರು.

    ಈ ರ‍್ಯಾಲಿಯಲ್ಲಿ ಬಿಜೆಪಿ ಭಟ್ಕಳ ಮಂಡಳ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಮುಖರಾದ ಗೋವಿಂದ ನಾಯ್ಕ, ಈಶ್ವರ ನಾಯ್ಕ, ಶಿವಾನಿ ಶಾಂತಾರಾಮ, ಸುಬ್ರಾಯ ದೇವಾಡಿಗ, ಶ್ರೀಕಾಂತ ನಾಯ್ಕ, ರಾಜೇಶ ನಾಯ್ಕ, ದಿನೇಶ ನಾಯ್ಕ, ಪ್ರಮೋದ್ ಜೋಶಿ, ರವಿ ನಾಯ್ಕ ಜಾಲಿ, ಭಾಸ್ಕರ ದೈಮನೆ, ಸುನೀಲ್ ಕಾಮತ್, ಉಮೇಶ ನಾಯ್ಕ, ಶ್ರೀಧರ ನಾಯ್ಕ, ಮೋಹನ ನಾಯ್ಕ, ಮುಕುಂದ ನಾಯ್ಕ, ಸುರೇಶ ನಾಯ್ಕ, ರಾಮಚಂದ್ರ ನಾಯ್ಕ, ಸುನಿತಾ ಹೆರೂರಕರ್, ಸವಿತಾ ಗೊಂಡ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

    ಮಂಡಳ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

    ಗುರುಸುಧೀಂದ್ರ ಕಾಲೇಜು ವಿದ್ಯಾರ್ಥಿಗಳಿಂದ ಭವ್ಯ ‘ತಿರಂಗಾ ಯಾತ್ರೆ’:

    ಇದೇ ಸಂದರ್ಭದಲ್ಲಿ, 80ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ‘ಹರ್ ಘರ್ ತಿರಂಗಾ’ ಸಂದೇಶ ಸಾರಲು ಮತ್ತು ಸಾರ್ವಜನಿಕರಲ್ಲಿ ರಾಷ್ಟ್ರಧ್ವಜದ ಮೇಲಿನ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಟ್ಕಳದ ಪ್ರತಿಷ್ಠಿತ ಶ್ರೀ ಗುರುಸುಧೀಂದ್ರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ದೇಶಭಕ್ತ ಬಂಧುಗಳು ಸೇರಿ ಭವ್ಯ ‘ತಿರಂಗಾ ಯಾತ್ರೆ’ ನಡೆಸಿದರು.

    ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದ ನೂರಾರು ವಿದ್ಯಾರ್ಥಿಗಳು ರಾಷ್ಟ್ರಪ್ರೇಮದ ಘೋಷಣೆಗಳನ್ನು ಕೂಗುತ್ತಾ ಸಾಗಿದ್ದು, ಪಟ್ಟಣದ ರಸ್ತೆಗಳಲ್ಲಿ ದೇಶಭಕ್ತಿಯ ವಾತಾವರಣ ಮುಗಿಲು ಮುಟ್ಟುವಂತೆ ಮಾಡಿತು.

    About The Author

    error: Content is protected !!