August 24, 2026

ಅನಾಮಿಕ ದೂರು: ಭಟ್ಕಳ ತಾಲೂಕು ಆಸ್ಪತ್ರೆಗೆ DMO ಭೇಟಿ – ವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ಪರ ಸಾರ್ವಜನಿಕರ ಬ್ಯಾಟಿಂಗ್!

ಭಟ್ಕಳ: ತಾಲೂಕು ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ಅವರ ವಿರುದ್ಧ ಅನಾಮಧೇಯ ವ್ಯಕ್ತಿಯೊಬ್ಬರು ವಾಟ್ಸಾಪ್ ಮೂಲಕ ದೂರು ನೀಡಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ವೈದ್ಯಾಧಿಕಾರಿ (DMO) ಡಾ. ರಮೇಶ ರಾವ್ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಸತ್ಯಾಸತ್ಯತೆಯ ಪರಿಶೀಲನೆ ನಡೆಸಿದರು.

ದೂರಿನಲ್ಲಿ ಉಲ್ಲೇಖಿಸಲಾದ ಆರೋಪಗಳಿಗೆ ಸಂಬಂಧಿಸಿದಂತೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಡಿಎಂಒ, ಆಡಳಿತ ವ್ಯವಸ್ಥೆ, ವೈದ್ಯಕೀಯ ಸೇವೆ ಹಾಗೂ ದೂರಿಗೆ ಸಂಬಂಧಿಸಿದ ದಾಖಲೆಗಳನ್ನು ಕೂಲಂಕುಷವಾಗಿ ತನಿಖೆಗೆ ಒಳಪಡಿಸಿದರು.

ವೈದ್ಯರ ಪರವಾಗಿ ಧ್ವನೆ ಎತ್ತಿದ ಸಾರ್ವಜನಿಕರು:

ಡಿಎಂಒ ಆಸ್ಪತ್ರೆಗೆ ಆಗಮಿಸಿದ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿದ ನೂರಾರು ಸಾರ್ವಜನಿಕರು ಹಾಗೂ ರೋಗಿಗಳ ಬಂಧುಗಳು ಡಾ. ಅರುಣ್ ಕುಮಾರ್ ಪರವಾಗಿ ಬೆಂಬಲ ವ್ಯಕ್ತಪಡಿಸಿದರು.

ವೈದ್ಯಾಧಿಕಾರಿಗಳು ರೋಗಿಗಳ ಅಗತ್ಯಗಳಿಗೆ ತಕ್ಷಣ ಸ್ಪಂದಿಸುತ್ತಿದ್ದು, ಆಸ್ಪತ್ರೆಯ ಒಟ್ಟಾರೆ ಸೇವೆಯನ್ನು ಸುಧಾರಿಸಲು ಶ್ರಮಿಸುತ್ತಿದ್ದಾರೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಬಡ ವರ್ಗದವರಿಗೆ ಅನುಕೂಲ: ತಾಲೂಕು ಆಸ್ಪತ್ರೆಯ ಉತ್ತಮ ಸೇವೆಯಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿದ್ದು, ಹೊರ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಿಗೆ ತೆರಳುವುದು ತಪ್ಪಿದೆ. ಇದರಿಂದ ಸಾರ್ವಜನಿಕರ ಸಮಯ ಹಾಗೂ ಹಣ ಉಳಿತಾಯವಾಗುತ್ತಿದೆ ಎಂದು ತಿಳಿಸಿದರು.

    ಪಾರದರ್ಶಕ ತನಿಖೆಗೆ ಒತ್ತಾಯ:

    ಅನಾಮಧೇಯ ದೂರಿನ ಹಿಂದಿನ ಸತ್ಯಾಸತ್ಯತೆಯನ್ನು ಇಲಾಖೆಯು ಪಾರದರ್ಶಕವಾಗಿ ತನಿಖೆ ನಡೆಸಬೇಕು. ಬರಿ ಆರೋಪಗಳನ್ನು ಇಟ್ಟುಕೊಂಡು ತೀರ್ಮಾನಕ್ಕೆ ಬರುವ ಬದಲು ದಾಖಲೆಗಳು, ಸಿಬ್ಬಂದಿಯ ಹೇಳಿಕೆ ಹಾಗೂ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು. ಒಂದು ವೇಳೆ ದೂರು ಸುಳ್ಳಾಗಿದ್ದರೆ, ದೂರು ನೀಡಿದ ವ್ಯಕ್ತಿಯ ದುರುದ್ದೇಶದ ಕುರಿತೂ ತನಿಖೆಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

    “ತನಿಖೆಯ ನೆಪದಲ್ಲಿ ಬಡ ರೋಗಿಗಳಿಗೆ ದೊರೆಯುತ್ತಿರುವ ವೈದ್ಯಕೀಯ ಸೇವೆಗೆ ಯಾವುದೇ ಭಂಗ ಬರಬಾರದು. ವೈಯಕ್ತಿಕ ದ್ವೇಷ ಸಾಧನೆಗಾಗಿ ದೂರು ನೀಡಲಾಗಿದೆಯೇ ಎಂಬುದೂ ಸ್ಪಷ್ಟವಾಗಬೇಕು.” — ಸಾರ್ವಜನಿಕರ ಮನವಿ

    ಆಸ್ಪತ್ರೆಯ ಮೂಲಸೌಕರ್ಯ ಸುಧಾರಣೆಗೆ ಆಗ್ರಹ:

    ವೈದ್ಯಾಧಿಕಾರಿ ಮೇಲಿನ ದೂರಿನ ವಿಚಾರಣೆಯ ಜೊತೆಗೆ ತಾಲೂಕು ಆಸ್ಪತ್ರೆಯಲ್ಲಿರುವ ವೈದ್ಯರು, ಸಿಬ್ಬಂದಿ ಅಭಾವ ಹಾಗೂ ಮೂಲಸೌಕರ್ಯಗಳ ಕೊರತೆಯನ್ನು ನಿವಾರಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಗಮನ ಹರಿಸಬೇಕು. ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಜಿಲ್ಲಾ ಆರೋಗ್ಯಾಧಿಕಾರಿಗಳು (DHO) ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ನಾರಾಯಣ ಖಾರ್ವಿ, ಪರಮೇಶ್ವರ ನಾಯ್ಕ, ಬಾಬು ನಾಯ್ಕ, ಶಂಕರ್ ನಾಯ್ಕ, ಶ್ರೀಧರ್ ನಾಯ್ಕ, ಅಪ್ಪು ನಾಯ್ಕ ಸೇರಿದಂತೆ ಹಲವು ಮುಖಂಡರು, ಸಾರ್ವಜನಿಕರು ಹಾಗೂ ರೋಗಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು.

    About The Author

    error: Content is protected !!