September 12, 2026

ಟ್ಯಾಕ್ಸಿ ಸ್ಟ್ಯಾಂಡ್‌ಗೆ ಸೂಕ್ತ ಸ್ಥಳ ಕಲ್ಪಿಸಲು ಎಎಸ್‌ಪಿಗೆ ಭಟ್ಕಳ ಟ್ಯಾಕ್ಸಿ ಚಾಲಕರ ಸಂಘದಿಂದ ಮನವಿ

ಭಟ್ಕಳ: ಪಟ್ಟಣದಲ್ಲಿ ಟ್ಯಾಕ್ಸಿ ವಾಹನಗಳ ನಿಲುಗಡೆಗೆ ಸೂಕ್ತವಾದ ಸ್ಟ್ಯಾಂಡ್‌ ಅಥವಾ ಪಾರ್ಕಿಂಗ್ ಸ್ಥಳ ಕಲ್ಪಿಸಿಕೊಡುವಂತೆ ಆಗ್ರಹಿಸಿ ಭಟ್ಕಳ ತಾಲೂಕು ಟ್ಯಾಕ್ಸಿ ಚಾಲಕರು ಹಾಗೂ ವಾಹನ ಮಾಲಕರ ಸಂಘದ ವತಿಯಿಂದ ಎಎಸ್‌ಪಿ ರಾನು ಗುಪ್ತ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

2018ರಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕ ಟ್ಯಾಕ್ಸಿ ನಿಲುಗಡೆಗೆ ಸೂಕ್ತ ಸ್ಥಳವಿಲ್ಲದೆ ಸಮಸ್ಯೆ ಎದುರಾಗಿದೆ. ವಿವಿಧ ಇಲಾಖೆಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.

ನಿಗದಿತ ಸ್ಟ್ಯಾಂಡ್ ಇಲ್ಲದ ಕಾರಣ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಬೇಕಾದ ಅನಿವಾರ್ಯತೆಯಿದ್ದು, ಪ್ರಯಾಣಿಕರನ್ನು ಹತ್ತಿ-ಇಳಿಸುವಾಗ ಸಂಚಾರ ದಟ್ಟಣೆ ಹಾಗೂ ಚಾಲಕರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ.

ಶಾಶ್ವತ ಪರಿಹಾರಕ್ಕೆ ಆಗ್ರಹ: ಪೊಲೀಸ್ ಇಲಾಖೆ, ಪುರಸಭೆ, ತಾಲೂಕು ಆಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳು ಸಮನ್ವಯ ಸಾಧಿಸಿ ಭಟ್ಕಳ ಬಸ್ ನಿಲ್ದಾಣದ ಎದುರು ಸುರಕ್ಷಿತ ಹಾಗೂ ಕಾನೂನುಬದ್ಧ ಟ್ಯಾಕ್ಸಿ ಸ್ಟ್ಯಾಂಡ್‌ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.

    ಮನವಿ ಸಲ್ಲಿಕೆ ವೇಳೆ ಸಂಘದ ಅಧ್ಯಕ್ಷ ಫೈರೋಜ್ ಖಾನ್, ಉಪಾಧ್ಯಕ್ಷ ಜಯಂತ ನಾಯ್ಕ, ಕಾರ್ಯದರ್ಶಿ ದಿನೇಶ್ ಮೊಗೇರ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

    About The Author

    error: Content is protected !!