ಭಟ್ಕಳ: ತಾಲೂಕಿನ ಪ್ರಸಿದ್ಧ ಶ್ರೀ ಮಹಾತೋಬಾರ ಮುರುಡೇಶ್ವರ ದೇವರ ಓಲಗಮಂಟಪದಲ್ಲಿ ಸಾರ್ವಜನಿಕ ಶ್ರೀ ಸಿದ್ಧಿವಿನಾಯಕ ಸೇವಾ ಟ್ರಸ್ಟ್ ವತಿಯಿಂದ 50ನೇ ವರ್ಷದ ‘ಸುವರ್ಣ ಸಂಭ್ರಮ’ದ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 14ರಿಂದ 24ರವರೆಗೆ 11 ದಿನಗಳ ಕಾಲ ವೈಭವದಿಂದ ಜರುಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಶಂಕರ ಭಟ್ರಹಿತ್ಲು ತಿಳಿಸಿದರು.
₹1 ಕೋಟಿ ವೆಚ್ಚ ಹಾಗೂ ವಿಶೇಷ ಕಾರ್ಯಕ್ರಮಗಳು: 1977ರಲ್ಲಿ ಆರಂಭಗೊಂಡು ಐದು ದಶಕಗಳ ಪಯಣ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ₹1 ಕೋಟಿಗೂ ಅಧಿಕ ವೆಚ್ಚದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವದ ಐದು ದಿನ ಭಕ್ತರಿಗೆ ವಿಶೇಷ ಅನ್ನದಾನ ಹಾಗೂ ಸೆ.20ರಂದು ಪ್ರಸಾದ ನೇತ್ರಾಲಯದ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ವಸ್ತುಪ್ರದರ್ಶನ ಆಯೋಜಿಸಲಾಗಿದೆ.
ಓಲಗಮಂಟಪ ನವೀಕರಣ ಹಾಗೂ ಕೊಡುಗೆ: ದೇವಸ್ಥಾನಕ್ಕೆ ಎರಡು ಶಿವಸ್ತಂಭಗಳು, 11 ಸ್ಟ್ರೀಟ್‌ಲೈಟ್‌ಗಳು ಹಾಗೂ ಭದ್ರತೆಗಾಗಿ ನಾಲ್ಕು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಓಲಗಮಂಟಪದ ಮುಂಭಾಗವನ್ನು ಆಕರ್ಷಕ ಕಲಾಕೃತಿಗಳೊಂದಿಗೆ ನವೀಕರಿಸಲು ಯೋಜಿಸಲಾಗಿದ್ದು, ಆಡಳಿತ ಧರ್ಮದರ್ಶಿ ಸತೀಶ ಆರ್. ಶೆಟ್ಟಿ ಸಹಕಾರ ನೀಡಿದ್ದಾರೆ ಎಂದು ಟ್ರಸ್ಟ್ ಗೌರವಾಧ್ಯಕ್ಷ ಎಸ್.ಎಸ್. ಕಾಮತ್ ವಿವರಿಸಿದರು.
‘ಸುವರ್ಣ ಸಂಕಲ್ಪ ಸಂಚಯನಿಧಿ’ ಸ್ಥಾಪನೆ: ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಸಂಗ್ರಹವಾಗುವ ದೇಣಿಗೆಯ ಶೇ.25ರಷ್ಟು ಮೊತ್ತವನ್ನು ಮೀಸಲಿರಿಸಿ ‘ಸುವರ್ಣ ಸಂಕಲ್ಪ ಸಂಚಯನಿಧಿ’ ಸ್ಥಾಪಿಸಲಾಗುವುದು ಎಂದು ಟ್ರಸ್ಟ್ ಉಪಾಧ್ಯಕ್ಷ ಕೃಷ್ಣ ನಾಯ್ಕ ಜಮೀನ್ದಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗಣಪತಿ ಮೂರ್ತಿ ತಯಾರಕ ದೇವಿದಾಸ ಗುಡಿಗಾರ ಹಾಗೂ ಸಮಿತಿಯ ಪ್ರಮುಖರಾದ ಸಂತೋಷ ನಾಯ್ಕ, ಲಕ್ಷ್ಮಣ ನಾಯ್ಕ, ಶಂಭು ಹೆಗಡೆ, ಅಶೋಕ ಪೂಜಾರಿ, ನಾಗೇಶ ನಾಯ್ಕ ಉಪಸ್ಥಿತರಿದ್ದರು.
About The Author


More Stories
ಮುರ್ಡೇಶ್ವರದಲ್ಲಿ ಭವ್ಯ ಬಿಲ್ವಾರ್ಚನೆ: 2 ಸಾವಿರಕ್ಕೂ ಅಧಿಕ ಭಕ್ತರು ಭಾಗಿ
ಭಟ್ಕಳದಲ್ಲಿ ಮನೆಯ ಶೆಡ್ನಿಂದ ಹೋಂಡಾ ಸ್ಕೂಟಿ ಕಳವು
ದೇಶಸೇವೆಯೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ: ಮುರ್ಡೇಶ್ವರ ಶಾಖೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ