September 12, 2026

ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ವಿದ್ಯುತ್ ಯೋಜನೆ ಕೈಬಿಡಲು ಚಂದ್ರಕಾಂತ ಕೊಚರೇಕರ ಆಗ್ರಹ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ವಲಯದಲ್ಲಿ ಪ್ರಸ್ತಾಪಿತ ‘ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ವಿದ್ಯುತ್ ಯೋಜನೆ’ಯನ್ನು ಕೈಬಿಡಬೇಕು ಎಂದು ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಒತ್ತಾಯಿಸಿದ್ದಾರೆ. ಈ ಕುರಿತು ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ಹಾಗೂ ಭೂಪೇಂದ್ರ ಯಾದವ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪರಿಸರ ನಾಶದ ಭೀತಿ: ಪಶ್ಚಿಮಘಟ್ಟದ ಶರಾವತಿಕೊಳ್ಳದ ಮಳೆಕಾಡು, ಸಿಂಗಳಿಕ ಅಭಯಾರಣ್ಯ ಹಾಗೂ ಜಲಮೂಲಗಳು ಜೀವವೈವಿಧ್ಯತೆಯ ಖಜಾನೆಯಾಗಿವೆ. ಸುರಂಗಗಳು, ಭೂಗತ ಕಾಲುವೆಗಳು, ವಿದ್ಯುತ್ ಸ್ಥಾವರ ಹಾಗೂ ಬೃಹತ್ ರಸ್ತೆಗಳ ನಿರ್ಮಾಣದಿಂದ ಈ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸುದೀರ್ಘ ಹಾನಿಯಾಗಲಿದ್ದು, ಭೂಕುಸಿತದ ಅಪಾಯವೂ ಎದುರಾಗಲಿದೆ.

ಜೀವನೋಪಾಯಕ್ಕೆ ತೊಂದರೆ: ನದಿಗೆ ಈಗಾಗಲೇ ಹಲವು ಅಣೆಕಟ್ಟುಗಳನ್ನು ನಿರ್ಮಿಸಲಾಗಿದ್ದು, ಹೊಸ ಯೋಜನೆಯಿಂದ ಬೇಸಿಗೆಯಲ್ಲಿ ಸಿಹಿನೀರಿನ ಹರಿವು ಕಡಿಮೆಯಾಗಿ ಸಮುದ್ರದ ಉಪ್ಪು ನೀರು ಒಳನುಗ್ಗುವ ಭೀತಿಯಿದೆ. ಇದರಿಂದ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಕುಡಿಯುವ ನೀರನ್ನೇ ನಂಬಿರುವ ಸ್ಥಳೀಯ ಸಮುದಾಯಗಳ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ.

ಸಮೀಕ್ಷೆ ಸ್ಥಗಿತಕ್ಕೆ ಒತ್ತಾಯ: ವಿಶ್ವ ಪಾರಂಪರಿಕ ತಾಣವಾಗಿರುವ ಶರಾವತಿ ಕೊಳ್ಳದಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆಗಾಗಿ ತಯಾರಿಸಲಾಗುತ್ತಿರುವ ಬದಲೀ ಡಿಪಿಆರ್ ಸಹಿತ ಮುಂದಿನ ಎಲ್ಲಾ ಸಮೀಕ್ಷೆ ಹಾಗೂ ಅಧ್ಯಯನ ಕಾರ್ಯಗಳನ್ನು ಸರ್ಕಾರ ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.

    About The Author

    error: Content is protected !!