September 8, 2026

“ನೇತ್ರದಾನ ಶ್ರೇಷ್ಠ ದಾನ” – ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ

ಹೊನ್ನಾವರ: “ಅನ್ನದಾನದಂತೆ ನೇತ್ರದಾನವೂ ಶ್ರೇಷ್ಠವಾದುದು. ಒಬ್ಬರ ನೇತ್ರದಾನದಿಂದ ಇಬ್ಬರು ಅಂಧರಿಗೆ ಬೆಳಕು ನೀಡಲು ಸಾಧ್ಯ. ನೇತ್ರದಾನದ ಬಗ್ಗೆ ತಪ್ಪು ತಿಳುವಳಿಕೆ ಬೇಡ, ಇದೊಂದು ಮಾನವೀಯ ಸೇವೆ” ಎಂದು ಹೊನ್ನಾವರ ತಾಲೂಕು ಆಸ್ಪತ್ರೆಯ ಜನರಲ್ ಮೆಡಿಸಿನ್ ತಜ್ಞ ವೈದ್ಯ ಡಾ. ಶ್ರೀನಿವಾಸ್ ನಾಯಕ ಹೇಳಿದರು.

ತಾಲೂಕು ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಇಎನ್‌ಟಿ ತಜ್ಞ ವೈದ್ಯ ಡಾ. ಜೈಮಿನಿ ಮಾತನಾಡಿ, “ಮರಣಾನಂತರ ಆರು ಗಂಟೆಯೊಳಗೆ ನೇತ್ರಗಳನ್ನು ಸಂಗ್ರಹಿಸಬೇಕಾಗುತ್ತದೆ. ಸಂಗ್ರಹಣೆಗೆ ಕೇವಲ 20 ನಿಮಿಷ ಸಾಕಾಗಲಿದ್ದು, ಇದರಿಂದ ದೇಹದಲ್ಲಾಗಲಿ ಅಥವಾ ಮುಖದಲ್ಲಾಗಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ” ಎಂದರು.

ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ ಮಾತನಾಡಿ, “ಡಾ. ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರು ನೇತ್ರದಾನ ಮಾಡುವ ಮೂಲಕ ನಮಗೆಲ್ಲ ಸ್ಪೂರ್ತಿಯಾಗಿದ್ದಾರೆ. ಪ್ರತಿಯೊಬ್ಬರೂ ನೇತ್ರದಾನ ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಮಾನವೀಯ ಕಾರ್ಯಕ್ಕೆ ಕೈಜೋಡಿಸಬೇಕು” ಎಂದು ಕರೆ ನೀಡಿದರು.

    ನೇತ್ರದಾನದ ಮುಖ್ಯ ಮಾಹಿತಿಗಳು:

    • ಒಬ್ಬರ ನೇತ್ರದಾನದಿಂದ ಇಬ್ಬರು ಅಂಧರಿಗೆ ಬೆಳಕು ಸಿಗುತ್ತದೆ.
    • ಮರಣ ಹೊಂದಿದ 6 ಗಂಟೆಯೊಳಗೆ ನೇತ್ರ ಸಂಗ್ರಹಿಸುವುದು ಅಗತ್ಯ.
    • ನೇತ್ರ ಸಂಗ್ರಹಣೆಗೆ ಕೇವಲ 20 ನಿಮಿಷ ಸಾಕು, ಮುಖದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
    • ಹತ್ತಿರದ ಬಂಧುಗಳು ನೇತ್ರದಾನ ಮಾಡಲು ಮನವೊಲಿಸುವುದು ಮುಖ್ಯ.

    ಕಾರ್ಯಕ್ರಮದಲ್ಲಿ ಸಹಾಯಕ ಆಡಳಿತಾಧಿಕಾರಿ ಶಶಿಕಲಾ ನಾಯ್ಕ, ಆಯುಷ್ ವೈದ್ಯಾಧಿಕಾರಿ ಡಾ. ಗುರುದತ್ತ ಕುಲಕರ್ಣಿ ಉಪಸ್ಥಿತರಿದ್ದರು. ಆಪ್ತಸಮಾಲೋಚಕ ವಿನಾಯಕ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿಗಳಾದ ಶಿಲ್ಪಾ ಹಾಗೂ ದೀಪಾ ಮಡಿವಾಳ ಸಹಕರಿಸಿದರು.

    About The Author

    error: Content is protected !!