September 22, 2026

ಜನತಾ ಕೋ-ಆಪರೇಟಿವ್ ಸೊಸೈಟಿಗೆ ₹3.33 ಕೋಟಿ ನಿವ್ವಳ ಲಾಭ: ಅಧ್ಯಕ್ಷ ಮಂಕಾಳ ಎಸ್. ವೈದ್ಯ

ಭಟ್ಕಳ: ಜನತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ 2025-26ನೇ ಸಾಲಿನಲ್ಲಿ ₹3.33 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸಂಘವು ಆರ್ಥಿಕವಾಗಿ ಮತ್ತಷ್ಟು ಸುದೃಢ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಮಂಕಾಳ ಎಸ್. ವೈದ್ಯ ತಿಳಿಸಿದರು.

ಪಟ್ಟಣದ ಮುಗಳಿಕೋಣೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಭಾನುವಾರ ನಡೆದ ಸಂಘದ 41ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ವರದಿ ಮಂಡಿಸಿದರು.

ಸದಸ್ಯತ್ವ ಹಾಗೂ ಶೇರು ಬಂಡವಾಳ: 2026ರ ಮಾರ್ಚ್ 31ರ ವೇಳೆಗೆ ಸಂಘದ ಒಟ್ಟು ಸದಸ್ಯರ ಸಂಖ್ಯೆ 35,168ಕ್ಕೇರಿದ್ದು, ವರದಿ ಸಾಲಿನಲ್ಲಿ 1,519 ಹೊಸ ಸದಸ್ಯರು ಸೇರ್ಪಡೆಯಾಗಿದ್ದಾರೆ. ಸಂಘದ ಶೇರು ಬಂಡವಾಳ ₹14.15 ಕೋಟಿಗೆ ತಲುಪಿದೆ.

ಠೇವಣಿ ಸಂಗ್ರಹ: ಸಂಘದ ಠೇವಣಿ ಮೊತ್ತವು ₹208.57 ಕೋಟಿಯಿಂದ ₹242.54 ಕೋಟಿಗೆ ಏರಿಕೆಯಾಗಿದೆ.

ಲಾಭದಾಯಕ ಶಾಖೆಗಳು: ಪ್ರಧಾನ ಕಚೇರಿ ಸೇರಿದಂತೆ ಸಂಘದ ಎಲ್ಲಾ 17 ಶಾಖೆಗಳೂ ಪ್ರಸ್ತುತ ಸಾಲಿನಲ್ಲಿ ಲಾಭದಾಯಕವಾಗಿ ಕಾರ್ಯನಿರ್ವಹಿಸಿವೆ.

ಸಾಮಾಜಿಕ ಸೇವೆಗೆ ಕೊಡುಗೆ: ಸಂಘದ ಲಾಭಾಂಶದ ಒಂದು ಭಾಗವನ್ನು ವಿದ್ಯಾರ್ಥಿಗಳಿಗೆ ಧನಸಹಾಯ, ಬಡ ಹಾಗೂ ಅನಾರೋಗ್ಯ ಪೀಡಿತರಿಗೆ ನೆರವು, ಕ್ರೀಡೆ, ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಉಪಕರಣಗಳ ಕೊಡುಗೆ ನೀಡಲು ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಧಾನ ವ್ಯವಸ್ಥಾಪಕ ವಿನಯ ನಾಯ್ಕ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷ ಪರಮೇಶ್ವರ ದೇವಾಡಿಗ ಸ್ವಾಗತಿಸಿ, ನಿರ್ದೇಶಕ ಕೃಷ್ಣಾ ನಾಯ್ಕ ವಂದಿಸಿದರು. ಸಭೆಯಲ್ಲಿ ನಿರ್ದೇಶಕರಾದ ನಾಗಪ್ಪ ಪೊಮ್ಮ ನಾಯ್ಕ, ಕೃಷ್ಣಾನಂದ ಪೈ, ತಿಮ್ಮಪ್ಪ ಜಟ್ಟಾ ನಾಯ್ಕ, ರಾಮಚಂದ್ರ ಕಿಣಿ, ವೆಂಕಟ್ರಮಣ ಮೊಗೇರ, ಅಲ್ಬರ್ಟ್ ಡಿಕೋಸ್ತಾ, ಲಕ್ಷ್ಮೀ ನಾಯ್ಕ, ಗೀತಾ ನಾಯ್ಕ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

error: Content is protected !!