September 22, 2026

ಬಾಕಡಕೇರಿ ಗಣೇಶೋತ್ಸವದ ಬೆಳ್ಳಿ ಮಹೋತ್ಸವ ಅದ್ದೂರಿ ಸಂಪನ್ನ: ದೇವಿಕಾನ ಹೊಳೆಯಲ್ಲಿ ಮೂರ್ತಿ ವಿಸರ್ಜನೆ

ಭಟ್ಕಳ: ತಾಲೂಕಿನ ಬಾಕಡಕೇರಿ, ಬಸ್ತಿ–ಕಾಯ್ಕಿಣಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಐದು ದಿನಗಳ ಕಾಲ ಆಯೋಜಿಸಲಾಗಿದ್ದ ಬೆಳ್ಳಿ ಮಹೋತ್ಸವದ ಗಣೇಶೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಮುಕ್ತಾಯಗೊಂಡಿತು.

ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು: ಕಳಶ ಮೆರವಣಿಗೆ, ಗಣಹೋಮ, ಸತ್ಯನಾರಾಯಣ ಪೂಜೆ ಹಾಗೂ ಮೂರು ದಿನಗಳ ಕಾಲ ಮಹಾ ಅನ್ನಸಂತರ್ಪಣೆ ಜರುಗಿತು. ಸಾಗರದ ಕೂಡ್ಲಿ ಮಠದ ಶ್ರೀ ಸಿದ್ಧವೀರ ಸ್ವಾಮಿಗಳಿಂದ ಭಕ್ತಿ ಪ್ರವಚನ, ನಾಟ್ಯಕಲಾ ಮುರುಳಿ ಮೋಹನ ತಂಡದಿಂದ ನೃತ್ಯ-ಸಂಗೀತ ಹಾಗೂ ‘ಶಿವಭಕ್ತ ಮಾಲಿ’ ಯಕ್ಷಗಾನ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದ್ದವು.

ಭವ್ಯ ವಿಸರ್ಜನಾ ಮೆರವಣಿಗೆ: ಶುಕ್ರವಾರ ಸಂಜೆ ಧಾರ್ಮಿಕ ವಿಧಿವಿಧಾನ, ಮುಡಿಗಂಧ ಪ್ರಸಾದ ಹಾಗೂ ಫಲಾವಳಿ ಹರಾಜು ತರವಾಹಿ ಚಂಡೆ, ಟ್ಯಾಬ್ಲೋ, ವೈವಿಧ್ಯಮಯ ವೇಷಭೂಷಣಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಯುವಕ-ಯುವತಿಯರು ಸಂಭ್ರಮದಿಂದ ಪಾಲ್ಗೊಂಡರು. ಅಂತಿಮವಾಗಿ ದೇವಿಕಾನ ಹೊಳೆಯಲ್ಲಿ ಕ್ರೇನ್ ಮೂಲಕ ಗಣೇಶನ ವಿಗ್ರಹವನ್ನು ಜಲಸ್ತಂಭನಗೊಳಿಸಲಾಯಿತು.

ದಾನಿಗಳಿಗೆ ಗೌರವ: ಪ್ರತಿವರ್ಷ ಗಣೇಶನ ಮೂರ್ತಿ ಒದಗಿಸುತ್ತಿರುವ ಕಾಯ್ಕಿಣಿಯ ನಿವೃತ್ತ ಶಿಕ್ಷಕ ಕೆ.ಆರ್. ನಾಯಕ ಅವರನ್ನು ಸಮಿತಿ ವತಿಯಿಂದ ಕೃತಜ್ಞತೆಯಿಂದ ಸ್ಮರಿಸಲಾಯಿತು.

    ಸಮಿತಿಯ ಅಧ್ಯಕ್ಷ ಮಾದೇವ ನಂದಿ ಬಾಕಡ, ಉಪಾಧ್ಯಕ್ಷ ಮಾದೇವ ದುರ್ಗಪ್ಪ ಬಾಕಡ, ಖಜಾಂಚಿ ತಿಮ್ಮಪ್ಪ ಶಂಭು ಬಾಕಡ, ಕಾರ್ಯದರ್ಶಿ ಮಂಜುನಾಥ ಮಾಸ್ತಪ್ಪ ಬಾಕಡ, ಸಹ ಉಪಾಧ್ಯಕ್ಷ ಶ್ರೀಧರ ಬಾಬು ಬಾಕಡ, ಸಹ ಕಾರ್ಯದರ್ಶಿ ಈಶ್ವರ ಮಂಗಳಾ ಬಾಕಡ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಉತ್ಸವದ ಯಶಸ್ಸಿಗೆ ಶ್ರಮಿಸಿದರು.

    About The Author

    error: Content is protected !!