October 21, 2026

ಭಟ್ಕಳ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಹಾಗೂ ದೀಪದಾನ ಕಾರ್ಯಕ್ರಮ

ಭಟ್ಕಳ: ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಹಾಗೂ ದೀಪದಾನ ಕಾರ್ಯಕ್ರಮವು ಕಾಲೇಜಿನ ಶ್ರೀಮತಿ ವಿದ್ಯಾ ರಮೇಶ್ ಶಾನಭಾಗ ಸಭಾಂಗಣದಲ್ಲಿ ಇತ್ತೀಚೆಗೆ ನೆರವೇರಿತು.

ಕಾರ್ಯಕ್ರಮವನ್ನು ಭಟ್ಕಳದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಗೇಶ್ ಶೆಟ್ಟಿಯವರು ಉದ್ಘಾಟಿಸಿ ಮಾತನಾಡಿ, “ವೃತ್ತಿಗೌರವ ಮತ್ತು ಸಮರ್ಪಣಾ ಮನೋಭಾವದಿಂದ ಸಾಮಾನ್ಯ ವಿದ್ಯಾರ್ಥಿಗಳನ್ನು ಉತ್ತಮ ವಿದ್ಯಾರ್ಥಿಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಉತ್ತಮ ಶಿಕ್ಷಕರು ವಿದ್ಯಾರ್ಥಿಗಳಿಗೆ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳ ಬದುಕಿನಲ್ಲಿ ಸದಾ ನೆನಪಿನಲ್ಲಿರಬೇಕಾದ ಶಿಕ್ಷಕರು ನೀವಾಗಬೇಕು” ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜಿನ പൂര്‍ವ ವಿದ್ಯಾರ್ಥಿ ಹಾಗೂ ಸಾಗರದ ಮೌಲಾನಾ ಆಜಾದ್ ಮಾದರಿ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀ ಭಾಸ್ಕರ್ ಹೆಬ್ಬಾರ್ ಅವರು ಮಾತನಾಡಿ, “ಶಿಲ್ಪಿಯು ಕಲ್ಲಿನಲ್ಲಿರುವ ಬೇಡವಾದ ಭಾಗಗಳನ್ನು ತೆಗೆದು ಸುಂದರವಾದ ವಿಗ್ರಹವನ್ನು ನಿರ್ಮಿಸುವಂತೆ, ಶಿಕ್ಷಕನು ವಿದ್ಯಾರ್ಥಿಗಳಲ್ಲಿರುವ ಕೆಟ್ಟ ಗುಣಗಳನ್ನು ದೂರಮಾಡಿ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕು. ಇಂದಿನ ದಿನಗಳಲ್ಲಿ ಎ.ಐ., ರೋಬೋಟ್‌ಗಳಂತಹ ತಂತ್ರಜ್ಞಾನಗಳ ಪ್ರಭಾವದಿಂದ ವಿದ್ಯಾರ್ಥಿಗಳಲ್ಲಿ ಮೌಲ್ಯಗಳು ಕುಸಿಯುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಶಿಕ್ಷಕರು ಬೋಧನೆಯ ಜೊತೆಗೆ ವಿದ್ಯಾರ್ಥಿಗಳಿಗೆ ಶಿಸ್ತು, ಮೌಲ್ಯಗಳು ಮತ್ತು ಮಾನವೀಯ ಗುಣಗಳ ಪಾಠವನ್ನೂ ಕಲಿಸುವ ಅಗತ್ಯವಿದೆ” ಎಂದು ತಿಳಿಸಿದರು.

ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ಸಮಿತ್ರಾ ಕೌಶಿಕ್ ಅವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ರಾಜೇಶ್ ನಾಯಕ್, “ಶಿಕ್ಷಕರು ದೇಶದ ನಿರ್ಮಾತೃಗಳು, ಹಾಗಾಗಿ ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು” ಎಂದು ಕಿವಿಮಾತು ಹೇಳಿದರು.

ದೀಪದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದಿ ನ್ಯೂ ಇಂಗ್ಲಿಷ್ ಶಾಲೆಯ ಮುಖ್ಯೋಪಾಧ್ಯಾಯರಾದ ಶರತ್ ಗುನಗಿ ಅವರು ಮಾತನಾಡಿ, “ಒಮ್ಮೆ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ನಂತರ ಸಂಪೂರ್ಣವಾಗಿ ತನ್ನನ್ನು ತಾನು ಆ ವೃತ್ತಿಗೆ ಸಮರ್ಪಿಸಿಕೊಳ್ಳಬೇಕು. ಬೋಧನೆಯ ಜೊತೆಗೆ ಶಾಲೆಯ ಇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು” ಎಂದು ಹೇಳಿದರು.

ದೀಪದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ರಮೇಶ ಖಾರ್ವಿ ಅವರು, ಕಾಲೇಜು ಉತ್ತಮ ಶಿಕ್ಷಕರನ್ನು ರೂಪಿಸುವಲ್ಲಿ ಬಹುವಿಧವಾಗಿ ಶ್ರಮಿಸುತ್ತಿದೆ ಎಂದು ಶ್ಲಾಘಿಸಿ, ವಿದ್ಯಾರ್ಥಿಗಳ ಮುಂದಿನ ಜೀವನ ಉಜ್ವಲವಾಗಲಿ ಎಂದು ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ವಿವಿಧ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥ ಭಟ್ ಅವರು ಸರ್ವರನ್ನೂ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ ಕಾಲೇಜಿನ ಮುನ್ನೋಟದ ಕುರಿತು ತಿಳಿಸಿದರು. ಉಪನ್ಯಾಸಕ ನಾಗರಾಜ ಮಡಿವಾಳ ವಂದಿಸಿದರೆ, ಪ್ರಶಿಕ್ಷಣಾರ್ಥಿಗಳಾದ ಲಿಡಿಯಾ, ಸ್ವಾತಿ ಕಾವ್ಯಾ ಮತ್ತು ಚೈತ್ರಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

About The Author

error: Content is protected !!