October 24, 2026

ಮೋಳೆ ಗ್ರಾಮದ ಬಸ್ ನಿಲ್ದಾಣದ ಎದುರು ಕಸದ ರಾಶಿ; ದುರ್ನಾತದಿಂದ ಸಾರ್ವಜನಿಕರ ಪರದಾಟ, ಕ್ರಮಕ್ಕೆ ಆಗ್ರಹ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಾಗವಾಡ/ಅಥಣಿ ತಾಲೂಕಿನ ಮೋಳೆ ಗ್ರಾಮದ ಬಸ್ ನಿಲ್ದಾಣದ ಎದುರುಗಡೆಯ ರಸ್ತೆ ಬದಿಯಲ್ಲಿ ದಿನದಿಂದ ದಿನಕ್ಕೆ ಕಸದ ರಾಶಿ ಹೆಚ್ಚಾಗುತ್ತಿದ್ದು, ಸ್ಥಳೀಯ ಪ್ರಯಾಣಿಕರು ಹಾಗೂ ಸಾರ್ವಜನಿಕರು ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ.

ಬಸ್ ಸ್ಟ್ಯಾಂಡ್ ಎದುರು ಹಾಕಲಾಗಿರುವ ಕಸವು ಸಂಪೂರ್ಣವಾಗಿ ಕೊಳೆತು ನಾರುತ್ತಿದ್ದು, ಉಂಟಾಗಿರುವ ವಿಪರೀತ ದುರ್ನಾತದಿಂದಾಗಿ ಸುತ್ತಮುತ್ತ ನಿಲ್ಲಲು, ಕುಳಿತುಕೊಳ್ಳಲು ಹಾಗೂ ಓಡಾಡಲು ಸಾಧ್ಯವಾಗದ ದುಸ್ಥಿತಿ ನಿರ್ಮಾಣವಾಗಿದೆ. ಕಸದ ರಾಶಿಯಿಂದಾಗಿ ಸೊಳ್ಳೆ ಮತ್ತು ನೊಣಗಳ ಕಾಟ ಮಿತಿಮೀರಿದ್ದು, ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

ಆಡಳಿತದ ನಿರ್ಲಕ್ಷ್ಯಕ್ಕೆ ಆಕ್ರೋಶ: ಗ್ರಾಮಸ್ಥರು ಹಾಗೂ ಪ್ರಯಾಣಿಕರು ಪ್ರತಿದಿನ ಈ ನಾರುವ ವಾತಾವರಣದಲ್ಲೇ ದಿನ ದೂಡುವಂತಾಗಿದ್ದರೂ, ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. “ಗ್ರಾಮದ ನೈರ್ಮಲ್ಯ ಹಾಗೂ ಸ್ವಚ್ಛತೆ ಕಾಪಾಡುವುದು ಪಂಚಾಯತಿಯ ಮೂಲಭೂತ ಕರ್ತವ್ಯ. ಆದರೆ ಆಡಳಿತದ ನಿರ್ಲಕ್ಷ್ಯದಿಂದ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ” ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಬಸ್ ಸ್ಟ್ಯಾಂಡ್ ಎದುರು ಬಿದ್ದಿರುವ ಕಸವನ್ನು ಸಂಪೂರ್ಣವಾಗಿ ತೆರವುಗೊಳಿಸಿ ನೈರ್ಮಲ್ಯ ಕಾಪಾಡಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರ ನೇತೃತ್ವದಲ್ಲಿ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಸಿದ್ದಾರೆ.

ಸ್ಥಳೀಯ ಆಡಳಿತದಿಂದ ಹಿಡಿದು ಸರ್ಕಾರದ ವಿವಿಧ ಹಂತದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನು ಮುಂದೆಯಾದರೂ ಈ ಸಮಸ್ಯೆಗೆ ಸ್ಪಂದಿಸುತ್ತಾರೆಯೇ ಅಥವಾ ಈ ಯಥಾಸ್ಥಿತಿ ಹೀಗೆಯೇ ಮುಂದುವರಿಯಲಿದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

About The Author

error: Content is protected !!