October 24, 2026

80 ಅಡಿ ಆಳದ ಬಾವಿಗೆ ಬಿದ್ದ ನಾಯಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಚಿಕ್ಕಬಳ್ಳಾಪುರ: ತಾಲೂಕಿನ ಕೋಡೆನಹಳ್ಳಿ ಗ್ರಾಮದಲ್ಲಿ ಮಂಜುನಾಥ್ ಎಂಬುವವರ ಜಮೀನಿನಲ್ಲಿದ್ದ ತೆರೆದ ಬಾವಿಗೆ ಕಾಲುಜಾರಿ ಬಿದ್ದಿದ್ದ ನಾಯಿಯನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಜೀವಂತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಜುನಾಥ್ ಅವರ ಹೊಲದಲ್ಲಿದ್ದ ಸುಮಾರು 30×30 ಅಡಿ ವಿಸ್ತಾರ ಹಾಗೂ 80 ಅಡಿ ಆಳದ ನೀರಿಲ್ಲದ ಮೆಟ್ಟಿಲುಗಳಿಲ್ಲದ ಬಾವಿಗೆ ನಾಯಿಯು ಆಕಸ್ಮಿಕವಾಗಿ ಬಿದ್ದು ಪ್ರಾಣ ರಕ್ಷಣೆಗಾಗಿ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಚಿಕ್ಕಬಳ್ಳಾಪುರ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದರು.

ಸಾಹಸಮಯ ಕಾರ್ಯಾಚರಣೆ: ಕರೆ ಬಂದ ತಕ್ಷಣ ಜಲವಾಹನದೊಂದಿಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ 3 ಗಂಟೆಗಳ ಕಾಲ ಶ್ರಮವಹಿಸಿ ಯಶಸ್ವಿ ಕಾರ್ಯಾಚರಣೆ ನಡೆಸಿದರು. ಹಗ್ಗಗಳ ಸಹಾಯದಿಂದ ಬಾವಿಯ ಕೆಳಗೆ ಇಳಿದ ಸಿಬ್ಬಂದಿ, ಬುಟ್ಟಿ ಹಾಗೂ ಚೀಲದ ಹಗ್ಗಗಳ ಮೂಲಕ ಬಾವಿಯಲ್ಲಿದ್ದ ನಾಯಿಯನ್ನು ಸುರಕ್ಷಿತವಾಗಿ ಮೇಲೆಕ್ಕೆ ಎಳೆದು ಜೀವಕರುಣಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಪ್ರಭಾರ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯಾದ ಹಾಲಸಿದ್ದ ವಸಂತ ಮೇತ್ರಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಅಗ್ನಿಶಾಮಕರಾದ ರವೀಂದ್ರ ಸಂಗಮ, ಚಾಲಕರಾದ ಮಡಿವಾಳರ ಬಸವರಾಜ, ನಾಗಪ್ಪ ಶಿವಾಪುರ ಹಾಗೂ ಸಿಬ್ಬಂದಿಯಾದ ಮಲ್ಲಿಕಾರ್ಜುನ ಕಾಡಪ್ಪನವರ, ದತ್ತಾತ್ರೇಯ, ಬೋರಗಾವಿ ಪಾಲ್ಗೊಂಡಿದ್ದರು. ಅಗ್ನಿಶಾಮಕ ತಂಡದ ಸಮಯಪ್ರಜ್ಞೆ ಹಾಗೂ ಕಾರ್ಯದಕ್ಷತೆಯನ್ನು ಕೋಡೆನಹಳ್ಳಿ ಗ್ರಾಮಸ್ಥರು ಕೊಂಡಾಡಿದ್ದು, ರಕ್ಷಣಾ ಕಾರ್ಯದಲ್ಲಿ ಸ್ಥಳೀಯರು ಸಹ ಸಹಕರಿಸಿದರು.

About The Author

error: Content is protected !!