October 26, 2026

‘ಸಂಭವಾಮಿ ಯುಗೇ ಯುಗೇ – ಕಮಲಿ ಕಲ್ಯಾಣ’ ನಾಟಕದ ಪೋಸ್ಟರ್ ಬಿಡುಗಡೆ

‘ದೈವ ಸಂಕಲ್ಪ’ ಯಶಸ್ಸಿನ ಬಳಿಕ ಹೊಸ ನಾಟಕಕ್ಕೆ ಹಡೀನ ಸರ್ಪನಕಟ್ಟೆ ತಂಡ ಸಜ್ಜು; ಜನೆವರಿಯಲ್ಲಿ ಸೋಡಿಗದ್ದೆ ಜಾತ್ರೆಯಲ್ಲಿ ಪ್ರದರ್ಶನ

ಭಟ್ಕಳ: ಸೋಡಿಗದ್ದೆ ಶ್ರೀ ಮಹಾಸತಿ ದೇವಿ ಜಾತ್ರೆಯ ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದ್ದ ‘ದೈವ ಸಂಕಲ್ಪ – ಮಾಯಾ ಮೋಹಿನಿ’ ನಾಟಕದ ಯಶಸ್ಸಿನ ಬೆನ್ನಲ್ಲೇ, ಹಡೀನ ಸರ್ಪನಕಟ್ಟೆ ಹವ್ಯಾಸಿ ರಂಗಭೂಮಿ ಕಲಾವಿದರ ತಂಡವು ‘ಸಂಭವಾಮಿ ಯುಗೇ ಯುಗೇ – ಕಮಲಿ ಕಲ್ಯಾಣ’ ಎಂಬ ನೂತನ ನಾಟಕದೊಂದಿಗೆ ರಂಗಪ್ರವೇಶಕ್ಕೆ ಸಜ್ಜಾಗಿದೆ. ಈ ನಾಟಕದ ಶೀರ್ಷಿಕೆ ಪೋಸ್ಟರ್ ಇತ್ತೀಚೆಗೆ ಬಿಡುಗಡೆಗೊಂಡಿದ್ದು, ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿರುವ ಸೋಡಿಗದ್ದೆ ಶ್ರೀ ಮಹಾಸತಿ ದೇವಿ ಜಾತ್ರೋತ್ಸವದಲ್ಲಿ ಮೊದಲ ಪ್ರದರ್ಶನ ನೀಡಲು ತಂಡ ಸಿದ್ಧತೆ ನಡೆಸುತ್ತಿದೆ.

ರಂಗಭೂಮಿ ಕಲಾವಿದ ಹಾಗೂ ಪತ್ರಕರ್ತ ಭಾಸ್ಕರ ನಾಯ್ಕ ಅವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿದ್ದ ‘ದೈವ ಸಂಕಲ್ಪ’ ನಾಟಕವು ಭಟ್ಕಳ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಯಶಸ್ವಿ ಪ್ರದರ್ಶನಗಳನ್ನು ಕಂಡು ಜನಪ್ರಿಯತೆ ಗಳಿಸಿತ್ತು.

‘ದೈವ ಸಂಕಲ್ಪ’ದ ಯಶಸ್ಸೇ ಪ್ರೇರಣೆ: ನೂತನ ನಾಟಕದ ಕುರಿತು ಮಾತನಾಡಿದ ನಿರ್ದೇಶಕ ಭಾಸ್ಕರ ನಾಯ್ಕ ಹಡೀನ, “ಕಳೆದ ವರ್ಷ ‘ದೈವ ಸಂಕಲ್ಪ’ ನಾಟಕಕ್ಕೆ ಪ್ರೇಕ್ಷಕರು ತೋರಿದ ಪ್ರೀತಿ ಮತ್ತು ಪ್ರೋತ್ಸಾಹವೇ ನಮ್ಮ ತಂಡಕ್ಕೆ ಹೊಸ ಚೈತನ್ಯ ನೀಡಿದೆ. ಆ ಯಶಸ್ಸಿನಿಂದ ಪ್ರೇರಣೆ ಪಡೆದು ಇದೀಗ ‘ಸಂಭವಾಮಿ ಯುಗೇ ಯುಗೇ – ಕಮಲಿ ಕಲ್ಯಾಣ’ ನಾಟಕವನ್ನು ಸಿದ್ಧಪಡಿಸುತ್ತಿದ್ದೇವೆ. ಕಲಾಭಿಮಾನಿಗಳು ಈ ಹೊಸ ಪ್ರಯತ್ನಕ್ಕೂ ಅದೇ ರೀತಿ ಬೆಂಬಲ ನೀಡಬೇಕು” ಎಂದು ಕೋರಿದರು.

ಶಿಕ್ಷಕ ಹಾಗೂ ರಂಗಭೂಮಿ ಕಲಾವಿದ ಉಮೇಶ್ ನಾಯ್ಕ ಸರ್ಪನಕಟ್ಟೆ ಮಾತನಾಡಿ, “ಸುಮಾರು ೨೫ರಿಂದ ೩೦ ಮಂದಿ ಕಲಾವಿದರು ಹಾಗೂ ತಂತ್ರಜ್ಞರು ದೈನಂದಿನ ಕೆಲಸದ ನಡುವೆಯೂ ರಂಗಭೂಮಿ ಮೇಲಿನ ಪ್ರೀತಿಯಿಂದ ಶ್ರಮಿಸುತ್ತಿದ್ದಾರೆ. ತಾಲೂಕಿನ ಹಾಗೂ ಜಿಲ್ಲೆಯ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇಂತಹ ಸ್ಥಳೀಯ ಹವ್ಯಾಸಿ ತಂಡಗಳ ರಂಗಪ್ರಯತ್ನಗಳಿಗೆ ಸಂಘಟಕರು ಮತ್ತು ಭಕ್ತರು ಹೆಚ್ಚಿನ ಅವಕಾಶ ನೀಡಿ ಪ್ರೋತ್ಸಾಹಿಸಬೇಕು” ಎಂದರು.

ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಹವ್ಯಾಸಿ ರಂಗಭೂಮಿ ಕಲಾವಿದರಾದ ಮಾಸ್ತಿ ನಾಯ್ಕ, ಲಕ್ಷ್ಮೀನಾರಾಯಣ ನಾಯ್ಕ, ಹನುಮಂತ ನಾಯ್ಕ, ಶ್ರೀನಿವಾಸ ನಾಯ್ಕ, ಕುಮಾರ್ ನಾಯ್ಕ, ಜಗದೀಶ್ ನಾಯ್ಕ, ಸುರೇಶ್ ನಾಯ್ಕ, ಮಾರುತಿ ನಾಯ್ಕ, ನಾಗರಾಜ್ ನಾಯ್ಕ ಸೇರಿದಂತೆ ತಂಡದ ಸದಸ್ಯರು ಉಪಸ್ಥಿತರಿದ್ದರು.

About The Author

error: Content is protected !!