October 26, 2026

ಕಡಲತೀರದಲ್ಲಿ ಮುಳುಗುತ್ತಿದ್ದ ಬೆಂಗಳೂರಿನ ಪ್ರವಾಸಿಗನ ರಕ್ಷಣೆ

ಜೀವರಕ್ಷಕ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಭಟ್ಕಳ: ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರ ಕಡಲತೀರದಲ್ಲಿ ಸೋಮವಾರ ಬೆಳಿಗ್ಗೆ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಮುಳುಗುತ್ತಿದ್ದ ಬೆಂಗಳೂರಿನ ಪ್ರವಾಸಿಗನೊಬ್ಬನನ್ನು ಜೀವರಕ್ಷಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಬೆಳಿಗ್ಗೆ ಸುಮಾರು ೧೦:೧೫ರ ವೇಳೆಗೆ ಬೆಂಗಳೂರಿನಿಂದ ಬಂದಿದ್ದ ಮೂವರು ಸ್ನೇಹಿತರ ಪೈಕಿ ದಿಲೀಪ್ ಕುಮಾರ್ ಎಂಬವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗ ತೊಡಗಿದ್ದರು. ಇದನ್ನು ತಕ್ಷಣ ಗಮನಿಸಿದ ಜೀವರಕ್ಷಕ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ. ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ತ್ವರಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಈ ರಕ್ಷಣಾ ಕಾರ್ಯದಲ್ಲಿ ಜೀವರಕ್ಷಕ ಸಿಬ್ಬಂದಿಗಳಾದ ವಿನೋದ ಹರಿಕಾಂತ್, ರವೀಂದ್ರ ಹರಿಕಾಂತ್, ಮುದಾಸಿರ್ ಬುಡ್ನ, ಗೌರೀಶ್ ಹರಿಕಾಂತ್ ಹಾಗೂ ಮೇಲ್ವಿಚಾರಕ ಸುಧಾಕರ ಹಳ್ಳೇರ ಪಾಲ್ಗೊಂಡಿದ್ದರು. ಹೋಂ ಗಾರ್ಡ್ ದತ್ತಾತ್ರೇಯ ಬಂಡಾರಿ ಮತ್ತು ಪೊಲೀಸ್ ಸಿಬ್ಬಂದಿ ಅಣ್ಣಪ್ಪ ಎಂ. ನಾಯ್ಕ್ ರಕ್ಷಣಾ ಕಾರ್ಯಕ್ಕೆ ಸಾಥ್ ನೀಡಿದರು.

ಕಡಲತೀರಕ್ಕೆ ಆಗಮಿಸುವ ಪ್ರವಾಸಿಗರು ಸಮುದ್ರದ ಆಳ ಹಾಗೂ ಅಲೆಗಳ ತೀವ್ರತೆ ಬಗ್ಗೆ ಎಚ್ಚರ ವಹಿಸಬೇಕು ಮತ್ತು ಸ್ಥಳದಲ್ಲಿರುವ ಜೀವರಕ್ಷಕರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಇಲಾಖೆ ವಿನಂತಿಸಿದೆ.

About The Author

error: Content is protected !!