October 27, 2026

ವಾಲ್ಮೀಕಿ ಜಯಂತಿ ಬಹಿಷ್ಕಾರ ಹಾಗೂ ಅಧಿಕಾರಿಗಳ ಗೈರಿಗೆ ಆಕ್ರೋಶ; ಕರವೇ ಸ್ವಾಭಿಮಾನಿ ಸೇನೆಯಿಂದ ಕಠಿಣ ಕ್ರಮಕ್ಕೆ ಆಗ್ರಹ

ಸೋಮವಾರಪೇಟೆ: ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ಆಚರಣೆಯ ಸಂದರ್ಭದಲ್ಲಿ ಸರ್ಕಾರದ ಶಿಷ್ಟಾಚಾರವನ್ನು ಗಾಳಿಗೆ ತೂರಿ, ಜಯಂತಿ ಕಾರ್ಯಕ್ರಮದಿಂದ ಗೈರುಹಾಜರಾಗಿ ಬೇಜವಾಬ್ದಾರಿತನ ಪ್ರದರ್ಶಿಸಿರುವ ತಾಲೂಕಿನ ಗೌಡಳ್ಳಿ ಹಾಗೂ ದೊಡ್ಡಮಳ್ತೆ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಮಹಾಪುರುಷರ ಜಯಂತಿಗಳನ್ನು ಘನತೆಯಿಂದ ಆಚರಿಸಬೇಕು ಎಂಬ ಕಟ್ಟುನಿಟ್ಟಿನ ನಿಯವಿದ್ದರೂ, ಸೋಮವಾರಪೇಟೆ ತಾಲೂಕಿನ ಕೆಲ ಪಂಚಾಯಿತಿಗಳಲ್ಲಿ ಪ್ರಮುಖ ಅಧಿಕಾರಿಗಳೇ ಗೈರಾಗಿ ಕಾಟಾಚಾರಕ್ಕೆ ಆಚರಣೆ ಮುಗಿಸಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ನೀರು ಗಂಟೆಗಳೇ ಗತಿ – ಅಧಿಕಾರಿಗಳ ಬೇಜವಾಬ್ದಾರಿ: ವಿಶೇಷವಾಗಿ ಗೌಡಳ್ಳಿ ಗ್ರಾ.ಪಂ.ನಲ್ಲಿ ಪಿಡಿಒ ಆಗಲಿ ಅಥವಾ ಲೆಕ್ಕ ಸಹಾಯಕ ಅವರಾಗಲಿ ಹಾಜರಿರಲಿಲ್ಲ. ದೊಡ್ಡಮಳ್ತೆ ಪಂಚಾಯಿತಿಯಲ್ಲೂ ಯಾವುದೇ ಜವಾಬ್ದಾರಿಯುತ ಅಧಿಕಾರಿಗಳು ಇರಲಿಲ್ಲ. ಈ ಎರಡೂ ಕಚೇರಿಗಳಲ್ಲಿ ಅಧಿಕಾರಿಗಳ ಬದಲು ಕೇವಲ ನೀರುಗಂಟೆಗಳನ್ನು ಇಟ್ಟುಕೊಂಡು ನಾಮಕಾವಸ್ಥೆಗೆ ಜಯಂತಿ ಆಚರಿಸಿರುವುದು ವಾಲ್ಮೀಕಿ ಮಹರ್ಷಿಗಳಿಗೆ ಹಾಗೂ ಸಮಾಜಕ್ಕೆ ಮಾಡಿರುವ ಅಪಮಾನವಾಗಿದೆ ಎಂದು ಖಂಡಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ಪರಿಶೀಲನೆಗೆ ಆಗ್ರಹ: “ಅಧಿಕಾರಿಗಳಿಗೆ ಮಹಾಪುರುಷರ ಜಯಂತಿ ಕೇವಲ ರಜಾ ದಿನವೇ? ಸಾರ್ವಜನಿಕರ ತೆರಿಗೆ ಹಣದಿಂದ ಸಂಬಳ ಪಡೆಯುವ ಇವರಿಗೆ ಕನಿಷ್ಠ ಸಾಮಾಜಿಕ ಜವಾಬ್ದಾರಿ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ” ಎಂದು ಫ್ರಾನ್ಸಿಸ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಕರ್ತವ್ಯಲೋಪ ಬಯಲು ಮಾಡಲು ಅಂದಿನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಹಿರಿಯ ಅಧಿಕಾರಿಗಳು ಮುಟ್ಟುಗೋಲು ಹಾಕಿ ಪರಿಶೀಲಿಸಬೇಕು. ಕರ್ತವ್ಯ ಲೋಪ ಎಸಗಿರುವ ಗೌಡಳ್ಳಿ ಹಾಗೂ ದೊಡ್ಡಮಳ್ತೆ ಗ್ರಾ.ಪಂ. ಪಿಡಿಒಗಳು ಸೇರಿದಂತೆ ಶಿಷ್ಟಾಚಾರ ಉಲ್ಲಂಘಿಸಿದ ಎಲ್ಲಾ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒ ಹಾಗೂ ತಾಲೂಕು ಪಂಚಾಯಿತಿ ಇಒ ಕಠಿಣ ಕಾನೂನು ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಸಂಘಟನೆಯಿಂದ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು  ಫ್ರಾನ್ಸಿಸ್ ಡಿಸೋಜ, ಜಿಲ್ಲಾಧ್ಯಕ್ಷರು, ಕರವೇ ಸ್ವಾಭಿಮಾನಿ ಸೇನೆ, ಕೊಡಗು ಜಿಲ್ಲೆ  ಎಚ್ಚರಿಸಿದ್ದಾರೆ.

About The Author

error: Content is protected !!