November 22, 2026

ಧರ್ಮ ಎಂಬುದು ಧಾರ್ಮಿಕತೆಯಲ್ಲ, ಅದು ಬದುಕಿನ ಪದ್ಧತಿ: ಪತ್ರಕರ್ತ ಸುಬ್ರಹ್ಮಣ್ಯ ಭಟ್ಟ

ಕಡವಿನಕಟ್ಟೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ

ಭಟ್ಕಳ: “ಧರ್ಮ ಎಂದರೆ ಕೇವಲ ಧಾರ್ಮಿಕತೆಯಲ್ಲ, ಅದು ನಮ್ಮ ಜೀವನದ ಒಂದು ಭಾಗ ಹಾಗೂ ಬದುಕುವ ಸನ್ಮಾರ್ಗದ ಪದ್ಧತಿಯಾಗಿದೆ” ಎಂದು ಪತ್ರಕರ್ತ ಸುಬ್ರಹ್ಮಣ್ಯ ಭಟ್ಟ ಹೇಳಿದರು.

ತಾಲೂಕಿನ ಕಡವಿನಕಟ್ಟೆ ಶ್ರೀ ದುರ್ಗಾ ಪರಮೇಶ್ವರಿ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಹುರುಳಿಸಾಲ್ ವಲಯ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಸಂಸ್ಕಾರದಿಂದ ಧರ್ಮಾಚರಣೆ ಸಾಧ್ಯ: “ಹಿಂದೆ ಪ್ರತಿ ಮನೆಯಲ್ಲೂ ಇದ್ದ ಭಜನಾ ಪದ್ಧತಿ ಇಂದು ಕಡಿಮೆಯಾಗುತ್ತಿದೆ. ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದಾಗ ಮಾತ್ರ ಯುವ ಪೀಳಿಗೆ ಧರ್ಮಾಚರಣೆಯತ್ತ ಮುಖ ಮಾಡುತ್ತದೆ. ಸಾಮೂಹಿಕ ಪೂಜೆ ಹಾಗೂ ಆರಾಧನೆಗಳು ಮಾನಸಿಕ ನೆಮ್ಮದಿಗೆ ಸಹಕಾರಿ. ಸೃಷ್ಟಿಯಿಲ್ಲದ ಹಿಂದೂ ಧರ್ಮಕ್ಕೆ ಲಯವೂ ಇಲ್ಲ, ಇದು ಶಾಶ್ವತವಾದದ್ದು” ಎಂದು ಸುಬ್ರಹ್ಮಣ್ಯ ಭಟ್ಟ ಅಭಿಪ್ರಾಯಪಟ್ಟರು.

ಸಮಾಜದ ಉದ್ಧಾರಕ್ಕೆ ಯೋಜನೆ ಸಹಕಾರಿ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮೀಣ ಠಾಣೆ ಪಿಎಸ್‌ಐ ಮಲ್ಲಿಕಾರ್ಜುನ, “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬಡವರ ಆರ್ಥಿಕ ಸಬಲೀಕರಣಕ್ಕೆ ಅತ್ಯಂತ ಸಹಕಾರಿಯಾಗಿದೆ. ಯೋಜನೆಯ ಕಾರ್ಯಕ್ರಮಗಳಿಗೆ ನಮ್ಮ ಸಂಪೂರ್ಣ ಸಹಕಾರವಿದೆ” ಎಂದರು.

ಭಟ್ಕಳ ಯೋಜನಾಧಿಕಾರಿ ಲತಾ ಬಂಗೇರ ಮಾತನಾಡಿ, “ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ೨೨ ವರ್ಷಗಳಿಂದ ಯೋಜನೆ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು, ಲಕ್ಷಾಂತರ ಕುಟುಂಬಗಳು ಆರ್ಥಿಕವಾಗಿ ಚೇತರಿಸಿಕೊಂಡಿವೆ. ಹಿರಿಯರಿಗೆ ಗೌರವ ಹಾಗೂ ಪ್ರಕೃತಿ ಆರಾಧನೆಯಿಂದ ಜೀವನದಲ್ಲಿ ಒಳಿತಾಗುತ್ತದೆ” ಎಂದರು.

ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿ, “ಸಣ್ಣ ಮಟ್ಟದಲ್ಲಿ ಆರಂಭವಾದ ಈ ಯೋಜನೆ ಇಂದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದು, ಲಕ್ಷಾಂತರ ಜನರನ್ನು ಸಮಾಜದ ಮುಖ್ಯವಾಹಿನಿಗೆ ತಂದಿದೆ” ಎಂದು ಶ್ಲಾಘಿಸಿದರು.

ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಶ್ರೀಧರ ಆನಂದ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಡವಿನಕಟ್ಟೆ ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷ ಪ್ರಶಾಂತ ಭಟ್ಟ ಹಾಗೂ ಜಾಲಿ ಪಟ್ಟಣ ಪಂಚಾಯತಿ ಸದಸ್ಯ ರಮೇಶ ನಾಯ್ಕ ಉಪಸ್ಥಿತರಿದ್ದರು.

ಹುರುಳಿಸಾಲ್ ವಲಯ ಮೇಲ್ವಿಚಾರಕ ರಮೇಶ ನಾಯ್ಕ ಸ್ವಾಗತಿಸಿದರು. ಹರೀಶ ಖಾರ್ವಿ ಹಾಗೂ ರಮೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಕೃಷ್ಣಾ ವರದಿ ವಾಚಿಸಿ, ಮಂಜುನಾಥ ವಂದಿಸಿದರು.

About The Author

error: Content is protected !!