November 22, 2026

ಭಟ್ಕಳ: ಮುಟ್ಟಳ್ಳಿ ಬೈಪಾಸ್ ಗಟಾರದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಹೊನ್ನಾವರ ಮೂಲದ ವ್ಯಕ್ತಿ ಎಂದು ಗುರುತು ಪತ್ತೆ

ಭಟ್ಕಳ: ತಾಲೂಕಿನ ಮುಟ್ಟಳ್ಳಿ ಬೈಪಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಸ್ತೆ ಬದಿಯ ಗಟಾರದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಮೃತರನ್ನು ಹೊನ್ನಾವರ ತಾಲೂಕಿನ ಮಂಕಿ ಸಮೀಪದ ಗುಳದಕೇರಿಯ ಪ್ರಕಾಶ್ ಮಂಜುನಾಥ ನಾಯ್ಕ (೫೬) ಎಂದು ಗುರುತಿಸಲಾಗಿದೆ.

ರಸ್ತೆ ಬದಿಯ ಗಟಾರದಲ್ಲಿ ದುರ್ನಾತ ಬೀರುತ್ತಿದ್ದ ಅಪರಿಚಿತ ಮೃತದೇಹವನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸಿಪಿಐ ದಿವಾಕರ ಪಿ.ಎಂ. ಹಾಗೂ ಪಿಎಸ್‌ಐ ನವೀನ ನಾಯ್ಕ ಅವರು ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ಧಾವಿಸಿ ಕೂಲಂಕಷ ಪರಿಶೀಲನೆ ನಡೆಸಿದರು. ಮೃತದೇಹವು ಸಂಪೂರ್ಣ ಕೊಳೆತು ಹೋಗಿದ್ದರಿಂದ ಸ್ಥಳದಲ್ಲೇ ಗುರುತು ಪತ್ತೆಹಚ್ಚುವುದು ಸವಾಲಾಗಿತ್ತು.

ನಾಪತ್ತೆ ಪ್ರಕರಣದಿಂದ ಸಿಕ್ಕ ಸುಳಿವು: ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ, ಲೈಫ್ ಕೇರ್ ಆಂಬುಲೆನ್ಸ್ ಮಾಲೀಕ ವಿನಾಯಕ್ ನಾಯ್ಕ ಹಾಗೂ ಸ್ಥಳೀಯ ಮೊಹಿದ್ದೀನ್ ಅವರ ಸಹಕಾರದೊಂದಿಗೆ ಮೃತದೇಹವನ್ನು ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು.

ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಪಕ್ಕದ ಮಂಕಿ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ ೨೯ರಂದು ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ದೂರು ದಾಖಲಾಗಿರುವುದು ಕಂಡುಬಂದಿದೆ. ತಕ್ಷಣವೇ ನಾಪತ್ತೆಯಾದವರ ಕುಟುಂಬಸ್ಥರನ್ನು ಸಂಪರ್ಕಿಸಿ ಭಟ್ಕಳಕ್ಕೆ ಕರೆಯಿಸಲಾಯಿತು. ಶವಾಗಾರದಲ್ಲಿದ್ದ ಮೃತದೇಹವನ್ನು ಪರಿಶೀಲಿಸಿದ ಪುತ್ರ, ಮೃತರನ್ನು ತಮ್ಮ ತಂದೆ ಪ್ರಕಾಶ್ ನಾಯ್ಕ ಎಂದು ಗುರುತಿಸಿದ್ದಾರೆ.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಪ್ರಕಾಶ್: ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಕಾಶ್ ನಾಯ್ಕ ಅವರು ಕಳೆದ ೪ ತಿಂಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅಕ್ಟೋಬರ್ ೨೯ರಂದು ಬೆಳಿಗ್ಗೆ ೧೦:೩೦ರ ಸುಮಾರಿಗೆ ಮನೆಯಿಂದ ಹೊರಟಿದ್ದ ಅವರು ಮತ್ತೆ ಮರಳಿ ಬಂದಿರಲಿಲ್ಲ. ಅಕ್ಟೋಬರ್ ೨೯ರಿಂದ ನವೆಂಬರ್ ೨ರ ನಡುವಿನ ಅವಧಿಯಲ್ಲಿ ಅವರು ಗಟಾರದಲ್ಲಿ ಬಿದ್ದು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ತಂದೆಯ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೃತರ ಪುತ್ರ ತಿಳಿಸಿದ್ದು, ಈ ಸಂಬಂಧ ಭಟ್ಕಳ ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

About The Author

error: Content is protected !!