November 22, 2026

ಅಳ್ಳಂಕಿ ಕಾಲೇಜಿನಲ್ಲಿ ರಾಜ್ಯೋತ್ಸವ ಆಚರಣೆ: ಹಿರಿಯ ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಕೊಚರೇಕರ ಕರೆ

ಕನ್ನಡ ರಾಜ್ಯೋತ್ಸವವು ಒಗ್ಗಟ್ಟು, ಸ್ವಾಭಿಮಾನ ಹಾಗೂ ಪ್ರಜಾಸತ್ತಾತ್ಮಕ ಆಶಯಗಳ ಸಂಕೇತ

ಹೊನ್ನಾವರ (ಅಳ್ಳಂಕಿ): “ಕನ್ನಡ ರಾಜ್ಯೋತ್ಸವದ ಆಚರಣೆಯು ಕನ್ನಡಿಗರ ಒಗ್ಗಟ್ಟು, ಸ್ವಾಭಿಮಾನ ಮತ್ತು ಪ್ರಜಾಸತ್ತಾತ್ಮಕ ಆಶಯಗಳ ಸಂಕೇತವಾಗಿದೆ. ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಕೊಡುಗೆಯನ್ನು ಸ್ಮರಿಸುವುದರ ಜೊತೆಗೆ ಅವರು ಕಂಡ ಕನಸಿನ ಕರ್ನಾಟಕವನ್ನು ಕಟ್ಟುವ ಕೆಲಸ ಮುಂದಿನ ದಿನಗಳಲ್ಲಿ ಆಗಬೇಕಿದೆ” ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಕೊಚರೇಕರ ಹೇಳಿದರು.

ಅಳ್ಳಂಕಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡ ತಾಯಿಯ ಮಮತೆ ಹಾಗೂ ಜ್ಞಾನದ ಭಂಡಾರ: ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ ಡಾ. ಜಿ.ಎಸ್. ಹೆಗಡೆ ಮಾತನಾಡಿ, “ಇಂದು ಕನ್ನಡಿಗರು ವಿಶ್ವಮಟ್ಟದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಸಾಧನೆಯ ಮುದ್ರೆಯೊತ್ತಿದ್ದಾರೆ. ಕನ್ನಡ ಕೇವಲ ಸಂವಹನದ ಸಾಧನವಲ್ಲ; ಅದು ತಾಯಿಯ ಮಮತೆ, ಮಣ್ಣಿನ ಸೊಗಡು ಹಾಗೂ ತಲೆಮಾರುಗಳಿಂದ ಹರಿದುಬಂದ ಜ್ಞಾನದ ಭಂಡಾರವಾಗಿದೆ. ವಿದ್ಯಾರ್ಥಿಗಳು ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಾಧನೆಯತ್ತ ಮುನ್ನಡೆಯಬೇಕು” ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕಿಶೋರ ನಾಯ್ಕ ಮಾತನಾಡಿ, “ಕನ್ನಡವನ್ನು ಉಳಿಸುವುದು ಎಂದರೆ ಕೇವಲ ಭೂತಕಾಲವನ್ನು ಸ್ಮರಿಸುವುದಷ್ಟೇ ಅಲ್ಲ, ಅದರ ವರ್ತಮಾನ ಹಾಗೂ ಭವಿಷ್ಯವನ್ನು ಸಮೃದ್ಧಗೊಳಿಸುವುದಾಗಿದೆ. ಸಮಾನತೆ ಮತ್ತು ಸೌಹಾರ್ದತೆಯ ಮಾದರಿ ನಾಡನ್ನು ಕಟ್ಟಲು ವಿದ್ಯಾರ್ಥಿಗಳು ಬದ್ಧತೆ ಬೆಳೆಸಿಕೊಳ್ಳಬೇಕು” ಎಂದರು.

ಡಾ. ಜಿ.ಎಸ್. ಹೆಗಡೆ ಅವರಿಗೆ ಸನ್ಮಾನ: ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಕದಂಬ ಕನ್ನಡ ಸಂಘದ ಸಂಸ್ಥಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿರುವ ನಿಕಟಪೂರ್ವ ಪ್ರಾಂಶುಪಾಲ ಡಾ. ಜಿ.ಎಸ್. ಹೆಗಡೆ ಅವರನ್ನು ಇದೇ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಾದ ಗಣೇಶ, ಅಕ್ಷಯ, ಕೃತ್ತಿಕಾ, ಪ್ರಿಯಾ, ಅಮೂಲ್ಯ ರಾಜ್ಯೋತ್ಸವದ ಕುರಿತು ಮಾತನಾಡಿದರು. ವರ್ಷಾ, ಪೂರ್ಣಿಮಾ ಮತ್ತು ಸಂಗಡಿಗರು ರಾಜ್ಯೋತ್ಸವ ಗೀತೆಗಳನ್ನು ಪ್ರಸ್ತುತಪಡಿಸಿದರೆ, ಲಿಖಿತಾ ಮತ್ತು ತಂಡದವರಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಜರುಗಿತು.

ಉಪನ್ಯಾಸಕ ಶೇಖರ ನಾಯ್ಕ ಸ್ವಾಗತಿಸಿದರು. ಸ್ವಾತಿ ಮೇಸ್ತ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ಸಮಿಯಾಭಾನು ವಂದಿಸಿದರು.

About The Author

error: Content is protected !!