November 22, 2026

ಕಲಾಸಿರಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಕಾವ್ಯೋತ್ಸವ ಸಂಭ್ರಮ

ಶಿಕ್ಷಣ ತಜ್ಞ ಡಾ. ಆರ್. ನರಸಿಂಹ ಮೂರ್ತಿ ಅವರಿಗೆ 2026ನೇ ಸಾಲಿನ ‘ಕಲಾಸಿರಿ ಪ್ರಶಸ್ತಿ’ ಪ್ರದಾನ

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿರಾಲಿ ಚಿತ್ರಾಪುರದ ಕಲಾಸಿರಿ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ‘ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ’ ಕಾರ್ಯಕ್ರಮದ ಅಡಿಯಲ್ಲಿ ‘ಡಾ. ಆರ್.ವಿ. ಸರಾಫ್ ಸ್ಮರಣೆ, ಕಲಾಸಿರಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಕಾವ್ಯೋತ್ಸವ’ ಕಾರ್ಯಕ್ರಮವು ಚಿತ್ರಾಪುರ ರಸ್ತೆಯ ಸಾಹಿತಿ ಶ್ರೀಧರ ಶೇಟ್ ಅವರ ನಿವಾಸ ‘ಕಲಾಸಿರಿ’ಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮದ ಆರಂಭದಲ್ಲಿ ಸಾಹಿತಿ ಹಾಗೂ ಜನಪ್ರಿಯ ವೈದ್ಯ ದಿವಂಗತ ಡಾ. ಆರ್.ವಿ. ಸರಾಫ್ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ನಾರಾಯಣ ಯಾಜಿ, “ಮನೆಯಂಗಳದಲ್ಲಿ ಕಾವ್ಯೋತ್ಸವ ಆಯೋಜಿಸಿ ಸಾಧಕರನ್ನು ಗುರುತಿಸುತ್ತಿರುವ ಶ್ರೀಧರ್ ಶೇಟ್ ದಂಪತಿಯ ಕಾರ್ಯವು ಅವರ ಕಲೆ ಮತ್ತು ಸಾಹಿತ್ಯ ಪ್ರೇಮಕ್ಕೆ ಸಾಕ್ಷಿಯಾಗಿದೆ. ಇಂತಹ ವೇದಿಕೆಗಳು ಮತ್ತಷ್ಟು ಕವಿಗಳು ಮತ್ತು ಕವಿತೆಗಳನ್ನು ಹುಟ್ಟುಹಾಕಲಿ” ಎಂದು ಆಶಿಸಿದರು.

ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದ ಆಯ್ಕೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, “ಶಿಕ್ಷಣ ತಜ್ಞ ಹಾಗೂ ಕಲಾ ಪೋಷಕ ಡಾ. ಆರ್. ನರಸಿಂಹ ಮೂರ್ತಿ ಅವರಿಗೆ ಈ ಬಾರಿಯ ಕಲಾಸಿರಿ ಪ್ರಶಸ್ತಿ ಅರ್ಪಿಸುವ ಮೂಲಕ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಲಾಗಿದೆ. ಸಾಹಿತ್ಯಾರಾಧಕರನ್ನು ಒಂದೆಡೆ ಸೇರಿಸಿ ಕಾವ್ಯೋತ್ಸವ ಸಂಘಟಿಸಿರುವುದು ಎಲ್ಲರಿಗೂ ಮಾದರಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಸ್ತಿ ಪ್ರದಾನ: ಶಿಕ್ಷಣ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿ ಕ್ಷೇತ್ರಕ್ಕೆ ಸಲ್ಲಿಸಿದ ಸುದೀರ್ಘ ಸೇವೆಯನ್ನು ಪರಿಗಣಿಸಿ ನಿವೃತ್ತ ಪ್ರಾಂಶುಪಾಲ ಡಾ. ಆರ್. ನರಸಿಂಹ ಮೂರ್ತಿ ಅವರಿಗೆ ‘2026ನೇ ಸಾಲಿನ ಕಲಾಸಿರಿ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ಶಿಕ್ಷಕರು ತರಗತಿಯ ಆಚೆಗೂ ವಿದ್ಯಾರ್ಥಿಗಳ ಜ್ಞಾನ ವಿಸ್ತಾರಕ್ಕೆ ನೆರವಾಗಬೇಕು. ಮಕ್ಕಳ ಕುತೂಹಲ ತಣಿಸುವ ತಾಳ್ಮೆ ಮತ್ತು ಪ್ರತಿಭೆಗೆ ಪ್ರೋತ್ಸಾಹ ನೀಡುವ ಗುಣ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಕಾವ್ಯೋತ್ಸವ ಹಾಗೂ ಗಣ್ಯರಿಗೆ ಗೌರವ: ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಶಿರಾಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ವೆಂಕಟೇಶ್ ನಾಯ್ಕ, ಸಾಹಿತಿ ಮಾನಾಸುತ ಶಂಭು ಹೆಗಡೆ, ಪ್ರಭಾರಿ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ಶಿರಾಲಿ, ಮುಖ್ಯಾಧ್ಯಾಪಕರಾದ ಕೆ.ಬಿ. ಮಡಿವಾಳ ಮತ್ತು ಡಿ.ಐ. ಮೊಗೇರ್ ಅವರನ್ನು ಸನ್ಮಾನಿಸಲಾಯಿತು.

ಕನ್ನಡ ಕಾವ್ಯೋತ್ಸವದಲ್ಲಿ ಎಂ.ಡಿ. ಪಕ್ಕಿ, ಕೃಷ್ಣ ಮೊಗೇರ್ ಅಳ್ವೆಕೋಡಿ, ಸುರೇಶ ಮುರ್ಡೇಶ್ವರ, ಜಯಶ್ರೀ ಆಚಾರಿ, ಸುಧಾ ಭಟ್, ಸುಮಲತಾ ನಾಯ್ಕ, ರಾಘವೇಂದ್ರ ಮಡಿವಾಳ, ಹೇಮಲತಾ ಶ್ರೀಧರ್, ಕೆ.ಎಲ್. ಶಾನಭಾಗ್, ನಂದನ ನಾಯ್ಕ, ರಾಜೀವಿ ಮೊಗೇರ್, ಶಂಕರ್ ನಾಯ್ಕ, ನಾಗರತ್ನ ನಾಯ್ಕ, ತೇಜ ಮೊಗೇರ್ ಸೇರಿದಂತೆ ಹಲವು ಕವಿಗಳು ಸ್ವರಚಿತ ಕವಿತೆಗಳನ್ನು ವಾಚಿಸಿ ರಂಜಿಸಿದರು.

ಕಸಾಪ ಗೌರವ ಕೋಶಾಧ್ಯಕ್ಷ ಹಾಗೂ ಕಲಾಸಿರಿ ಪ್ರತಿಷ್ಠಾನದ ಸಂಚಾಲಕ ಶ್ರೀಧರ ಶೇಟ್ ಸ್ವಾಗತಿಸಿ ಆಶಯ ನುಡಿಗಳನ್ನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ಹೇಮಲತಾ ಶ್ರೀಧರ ನಿರೂಪಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ ಕೆರೆಕಟ್ಟೆ, ಪೂರ್ಣಿಮಾ ಕರ್ಕಿಕರ್, ವಿನಾಯಕ ಅವಧಾನಿ, ಗಜಾನನ ಹೆಗಡೆ, ತಿಮ್ಮಪ್ಪ ದೇವಾಡಿಗ, ಗಣೇಶ್ ಗೌಡ, ನಾರಾಯಣ ದೇವಾಡಿಗ, ರಾಜೇಶ ನಾಯ್ಕ, ವೆಂಕಟೇಶ್ ಕೊಡಿಹಿತ್ತಲು, ನಾರಾಯಣ ಮೊಗೇರ್, ವಿನಾಯಕ ಚಿತ್ರಾಪುರ, ಡಾ. ಶ್ರೇಯಾಂಕ್, ಶ್ರೀಶಾ, ಪ್ರಣತಿ, ಲಕ್ಷ್ಮೀ, ಶೀತಲಾ ಚಿತ್ರಾಪುರ ಉಪಸ್ಥಿತರಿದ್ದರು.

About The Author

error: Content is protected !!