ಹಿರಿಯ ನಟಿ ಉಮಾಶ್ರೀ ಅವರಿಗೆ ‘ಕತಾರ್ ಕನ್ನಡ ಸಮ್ಮಾನ್’ ಪ್ರಶಸ್ತಿ ಪ್ರದಾನ; ವಾರ್ಷಿಕ ಸ್ಮರಣ ಸಂಚಿಕೆ ‘ಶ್ರೀಗಂಧ’ ಬಿಡುಗಡೆ
ದೋಹಾ (ಕತಾರ್): ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಸಂಯೋಜಿತ ಸಂಸ್ಥೆಯಾದ ‘ಕರ್ನಾಟಕ ಸಂಘ ಕತಾರ್’ (KSQ) ವತಿಯಿಂದ 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ‘ಕರುನಾಡ ವೈಭವ-2026’ ಸಾಂಸ್ಕೃತಿಕ ಮಹೋತ್ಸವವನ್ನು ಆಲ್ ವಕ್ರಾ ಸಮೀಪದ ಡಿಪಿಎಸ್-ಎಂಐಎಸ್ (DPS-MIS) ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಕತಾರ್ನಲ್ಲಿರುವ ಭಾರತದ ರಾಯಭಾರಿ ಡಾ. ಕೆ. ಶ್ರೀಕರ್ ರೆಡ್ಡಿ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ, ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗಣ್ಯರ ಉಪಸ್ಥಿತಿ – ಸ್ಮರಣ ಸಂಚಿಕೆ ಬಿಡುಗಡೆ: ಕಾರ್ಯಕ್ರಮದಲ್ಲಿ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಅಶ್ವನಿ ಕುಮಾರ್, ಐಸಿಬಿಎಫ್ (ICBF) ಸಂಯೋಜಕ ಹರೀಶ್ ಪಾಂಡೆ, ಕತಾರ್ ಸಂಸ್ಕೃತಿ ಸಚಿವಾಲಯದ ಮ್ಯೂಸಿಕ್ ಅಫೇರ್ಸ್ ಸೆಂಟರ್ ನಿರ್ದೇಶಕ ಖಾಲಿದ್ ಅಲ್ ಸಾಲೇಮ್, ಐಸಿಸಿ ಅಧ್ಯಕ್ಷ ಎ.ಪಿ. ಮಣಿಕಂಠನ್, ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ ಹಾಗೂ ಮಾಜಿ ಶಾಸಕ ಮೊಯ್ದೀನ್ ಬಾವಾ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಸ್ವಾಗತಿಸಿ, ಅಧ್ಯಕ್ಷೀಯ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಹೊಸದುರ್ಗ ವಾರ್ಷಿಕ ವರದಿ ಮಂಡಿಸಿದರು. ಇದೇ ವೇಳೆ, ಅನಿವಾಸಿ ಪ್ರತಿಭೆಗಳ ಲೇಖನ, ಕವನ, ಚಿತ್ರಕಲೆ ಹಾಗೂ ಸಾಧನೆಗಳನ್ನು ಒಳಗೊಂಡ ಸಂಘದ ವಾರ್ಷಿಕ ಸ್ಮರಣ ಸಂಚಿಕೆ ‘ಶ್ರೀಗಂಧ’ವನ್ನು ಸಂಪಾದಕ ಕಿಶೋರ್ ವಿ. ಮತ್ತು ತಂಡದ ನೇತೃತ್ವದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಉಪಾಧ್ಯಕ್ಷ ಅನಿಲ್ ಭಾಸಗಿ ವಂದಿಸಿದರು.
ಉಮಾಶ್ರೀ ಅವರಿಗೆ ಪ್ರತಿಷ್ಠಿತ ಗೌರವ: ಕನ್ನಡ ರಂಗಭೂಮಿ, ಚಿತ್ರರಂಗ ಹಾಗೂ ಸಾರ್ವಜನಿಕ ಕ್ಷೇತ್ರಕ್ಕೆ ಸಲ್ಲಿಸಿದ ಅಪಾರ ಸೇವೆಯನ್ನು ಪರಿಗಣಿಸಿ ಹಿರಿಯ ಚಲನಚಿತ್ರ ನಟಿ, ಮಾಜಿ ಸಚಿವೆ ಹಾಗೂ ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ ಅವರಿಗೆ ಪ್ರತಿಷ್ಠಿತ ‘ಕತಾರ್ ಕನ್ನಡ ಸಮ್ಮಾನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂತ್ರಮುಗ್ಧಗೊಳಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು: ಸಾಂಸ್ಕೃತಿಕ ಉತ್ಸವದಲ್ಲಿ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ವಿಶೇಷ ಉಪನ್ಯಾಸ ನೀಡಿದರು. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಘವೇಂದ್ರ (ರಾಗಿಣಿ), ಜಗ್ಗಪ್ಪ ಮತ್ತು ಸುಶ್ಮಿತಾ ಅವರ ಹಾಸ್ಯ ಪ್ರಹಸನಗಳು, ‘ಸರಿಗಮಪ’ ಗಾಯಕರಾದ ಮೆಹಬೂಬ್ ಸಾಬ್ ಹಾಗೂ ರೇವಣಸಿದ್ಧ ಫುಲಾರಿ ಅವರ ಸುಮಧುರ ಗಾಯನ, ನಿರೂಪಕಿ ಪ್ರಣೀತಾ ತಿಮ್ಮಪ್ಪ ಅವರ ನಿರೂಪಣೆ ಹಾಗೂ ಸ್ಥಳೀಯ ಮಕ್ಕಳು ಮತ್ತು ಕನ್ನಡಪರ ಸಹೋದರ ಸಂಸ್ಥೆಗಳ ಕಲಾವಿದರ ನೃತ್ಯ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಿದವು.
ಸಮಾರಂಭದಲ್ಲಿ ಐಸಿಸಿ ಸಲಹಾ ಮಂಡಳಿ ಅಧ್ಯಕ್ಷ ಪಿ.ಎನ್. ಬಾಬುರಾಜನ್, ಐಸಿಬಿಎಫ್ ಪ್ರಧಾನ ಕಾರ್ಯದರ್ಶಿ ಹಾಗೂ ಕೆಎಸ್ಕ್ಯೂ ಮಾಜಿ ಅಧ್ಯಕ್ಷ ದೀಪಕ್ ಶೆಟ್ಟಿ, ಐಸಿಸಿ ಪ್ರತಿನಿಧಿ ಸಂದೀಪ್ ಶ್ರೀರಾಮರೆಡ್ಡಿ, ಕೆಎಸ್ಕ್ಯೂ ಸಲಹಾ ಮಂಡಳಿ ಅಧ್ಯಕ್ಷ ಡಾ. ಎಂ. ರವಿಶೆಟ್ಟಿ, ಸದಸ್ಯರಾದ ಅರುಣ್ ಕುಮಾರ್, ವಿ.ಎಸ್. ಮನ್ನಂಗಿ, ಎಚ್.ಕೆ. ಮಧು, ಡಾ. ಸಂಜಯ್ ಕುದರಿ, ಮಹೇಶ್ ಗೌಡ ಹಾಗೂ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾದ ಮಂಜೋತ್ ಸುರೇಶ್, ಭಾವನಾ ನವೀನ್, ಶಶಿಧರ್ ಎಚ್.ಬಿ., ಎಲ್.ಜಿ. ಪಾಟೀಲ್, ಪ್ರಶಾಂತ್ ಹಿರೇಮಠ್, ಪ್ರಭುರಾಜು ಜಗಳೂರು, ಶುಭ ಆರ್. ರಾವ್, ದಾಕ್ಷಾಯಣಿ ಜಿ. ಮತ್ತು ಗುರುಪ್ರಸಾದ್ ಬಿ.ಕೆ. ಸೇರಿದಂತೆ ನೂರಾರು ಕನ್ನಡಿಗರು ಉಪಸ್ಥಿತರಿದ್ದರು.

More Stories
‘ಕರುನಾಡ ವೈಭವ-2026’ ವೇದಿಕೆಯಲ್ಲಿ ಡಾ. ಸಿ.ಎನ್. ಮಂಜುನಾಥ್ ದಂಪತಿಗೆ ಅದ್ದೂರಿ ಗೌರವ ಸನ್ಮಾನ
ಕೇಂದ್ರ ಸಚಿವ ಡಾ. ಚಂದ್ರಶೇಖರ್ ಪೆಮ್ಮಸಾನಿ ಭೇಟಿಯಾದ ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು
ದೋಹಾದಲ್ಲಿ ಕನ್ನಡದ ಡಿಂಡಿಮ ಬಾರಿಸುತ್ತಿರುವ ಮಣ್ಣಿನ ಮಗ: ಸುಬ್ರಹ್ಮಣ್ಯ ಹೆಬ್ಬಾಗಿಲು