ಕಾರವಾರದಲ್ಲಿ ಉನ್ನತ ಮಟ್ಟದ ಸಂವಾದ ಸಭೆ ಆಯೋಜಿಸಲು ಅರಣ್ಯ ಭೂಮಿ ಹಕ್ಕು ಹೋರಾಟ ಸಮಿತಿ ನಿಯೋಗ ಆಗ್ರಹ
ಭಟ್ಕಳ (ಉತ್ತರ ಕನ್ನಡ): ಜಿಲ್ಲೆಯ ಅರಣ್ಯ ಭೂಮಿ ಸಾಗುವಳಿದಾರರ ವಿವಿಧ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅರಣ್ಯ ಸಚಿವರನ್ನು ಜಿಲ್ಲೆಗೆ ಆಹ್ವಾನಿಸಿ, ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ವಿಧಾನಸಭೆ ಉಪಸಭಾಪತಿ ಮಂಕಾಳ ವೈದ್ಯ ಭರವಸೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಹಾಗೂ ಪ್ರಧಾನ ಸಂಚಾಲಕ, ಮಾಜಿ ಜಿ.ಪಂ. ಸದಸ್ಯ ಜಿ.ಎಂ. ಶೆಟ್ಟಿ ಅಚಿವೆ ಅವರ ನೇತೃತ್ವದ ನಿಯೋಗವು ಬಲಸೆಯಲ್ಲಿರುವ ಉಪಸಭಾಪತಿ ಮಂಕಾಳ ವೈದ್ಯ ಅವರ ನಿವಾಸಕ್ಕೆ ಭೇಟಿ ನೀಡಿ, ಅರಣ್ಯವಾಸಿಗಳ ಹಕ್ಕುಗಳ ಕುರಿತು ಸುದೀರ್ಘ ಚರ್ಚೆ ನಡೆಸಿತು.


ಲಕ್ಷಾಂತರ ಬಡ ಕುಟುಂಬಗಳ ಬದುಕು ಅತಂತ್ರ: ತಲೆತಲಾಂತರದಿಂದ ವಸತಿ ಮತ್ತು ಜೀವನೋಪಾಯಕ್ಕಾಗಿ ಅರಣ್ಯ ಭೂಮಿಯನ್ನು ಅವಲಂಬಿಸಿರುವ ಜಿಲ್ಲೆಯ ಲಕ್ಷಾಂತರ ಬಡ ಕುಟುಂಬಗಳ ಬದುಕು ಇಂದು ಅತಂತ್ರವಾಗಿದೆ. ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿನ ಲೋಪಗಳು ಹಾಗೂ 1978ರ ಪೂರ್ವದ ಒತ್ತುವರಿ ಸಕ್ರಮದ ವೇಳೆ ಕೈಬಿಟ್ಟು ಹೋದ ಅರ್ಹ ಪ್ರಕರಣಗಳ ಮರುಸಮೀಕ್ಷೆಗೆ ಸರ್ಕಾರದಿಂದ ಈವರೆಗೂ ಅಧಿಕೃತ ಆದೇಶ ಹೊರಬೀಳದಿರುವುದು ಸಾಗುವಳಿದಾರರ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ನಿಯೋಗವು ತೀವ್ರ ಕಳವಳ ವ್ಯಕ್ತಪಡಿಸಿತು.
ನಿಯೋಗ ಮಂಡಿಸಿದ ಪ್ರಮುಖ ಬೇಡಿಕೆಗಳು:
ಅಧಿಭೋಗದ ಹಕ್ಕು: ಪರಿಶಿಷ್ಟ ಪಂಗಡದವರಿಗೆ ಅರಣ್ಯ ಭೂಮಿಯ ಅಧಿಭೋಗದ ಹಕ್ಕು ನೀಡಿರುವ ಮಾದರಿಯಲ್ಲೇ, ಜಿಲ್ಲೆಯ ಇತರ ಪಾರಂಪರಿಕ ಅರಣ್ಯವಾಸಿಗಳು ಹಾಗೂ ಸಾಗುವಳಿದಾರರಿಗೂ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ನೀಡಲು ಪರಿಗಣಿಸಬೇಕು.
ಮರುಪರಿಶೀಲನೆ ಆದೇಶ ಅನುಷ್ಠಾನ: 2006ರ ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯ (2012ರ ತಿದ್ದುಪಡಿ ನಿಯಮ) ಅನ್ವಯ ಸ್ಥಳ ಮಹಜರು ಸಹಿತ ಕ್ಲೇಮುಗಳ ಮರುಪರಿಶೀಲನೆ ನಡೆಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗಳು ಇತ್ತೀಚೆಗೆ ಹೊರಡಿಸಿರುವ ಆದೇಶವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು.
ಉನ್ನತ ಮಟ್ಟದ ಸಂವಾದ ಸಭೆ: 2005ರ ಪೂರ್ವದ ಸಾಗುವಳಿದಾರರು ಹಕ್ಕಿನಿಂದ ವಂಚಿತರಾಗದಂತೆ ಪಾರದರ್ಶಕವಾಗಿ ಸ್ಥಳ ಮಹಜರು ನಡೆಸಲು, ಉಪಸಭಾಪತಿಗಳ ಮಧ್ಯಸ್ಥಿಕೆ ಹಾಗೂ ಜಿಲ್ಲೆಯ ಶಾಸಕರ ಉಪಸ್ಥಿತಿಯಲ್ಲಿ ಅರಣ್ಯ, ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಹೋರಾಟಗಾರರೊಂದಿಗೆ ಉನ್ನತ ಮಟ್ಟದ ಸಂವಾದ ಸಭೆ ಆಯೋಜಿಸಬೇಕು.
ಈ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ತಾವೇ ಮುಂಚೂಣಿಯಲ್ಲಿ ನಿಂತು ನೇತೃತ್ವ ವಹಿಸಬೇಕೆಂದು ನಿಯೋಗವು ಮಂಕಾಳ ವೈದ್ಯ ಅವರಲ್ಲಿ ಮನವಿ ಮಾಡಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಉಪಸಭಾಪತಿಗಳು, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

More Stories
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು
ಜಾಲಿಯಲ್ಲಿ ಬೆಳಕೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ
ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ!