ಶಿಕ್ಷಣವೇ ರಾಷ್ಟ್ರದ ಅಭಿವೃದ್ಧಿಯ ಮೂಲ ಶಕ್ತಿ; ಡಾ. ಬಿ. ಅಬ್ದುಲ್ ರಹಮಾನ್ ಪ್ರತಿಪಾದನೆ
ಕೂಡ್ಲಿಗಿ (ವಿಜಯನಗರ ಜಿಲ್ಲೆ): ಭಾರತದ ಪ್ರಥಮ ಶಿಕ್ಷಣ ಸಚಿವರಾದ ಸ್ವಾತಂತ್ರ್ಯ ಹೋರಾಟಗಾರ ಮಹಾನ್ ಚಿಂತಕ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜಯಂತಿ ಹಾಗೂ ‘ರಾಷ್ಟ್ರೀಯ ಶಿಕ್ಷಣ ದಿನ’ವನ್ನು ಪಟ್ಟಣದ ಮೌಲಾನಾ ಅಬುಲ್ ಕಲಾಂ ಆಜಾದ್ ಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಸ್ನೇಹಿತರ ಬಳಗದ ಸಂಯುಕ್ತಾಶ್ರಯದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸ್ನೇಹಿತರ ಬಳಗದ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಾ. ಬಿ. ಅಬ್ದುಲ್ ರಹಮಾನ್ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮೌಲಾನಾ ಆಜಾದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಲಾಯಿತು.

ಮೌಲಾನಾ ಆಜಾದ್ ಆದರ್ಶಗಳು ಪ್ರಾತಸ್ಮರಣೀಯ: ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಬಿ. ಅಬ್ದುಲ್ ರಹಮಾನ್, “ಮೌಲಾನಾ ಅಬುಲ್ ಕಲಾಂ ಆಜಾದ್ ಕೇವಲ ಒಬ್ಬ ವ್ಯಕ್ತಿಯಲ್ಲ, ದೇಶದ ಮಹಾ ಶಕ್ತಿ. 1888ರ ನವೆಂಬರ್ 11ರಂದು ಜನಿಸಿದ ಅವರು ತಮ್ಮ ಜೀವನವನ್ನೇ ದೇಶದ ಸ್ವಾತಂತ್ರ್ಯ, ಶಿಕ್ಷಣ ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಸಮರ್ಪಿಸಿಕೊಂಡಿದ್ದರು. ಮಹಾತ್ಮ ಗಾಂಧೀಜಿಯವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ ಅವರು, ದೇಶ ವಿಭಜನೆ ಸಂದರ್ಭದಲ್ಲಿ ಸರ್ವಧರ್ಮ ಸಮಭಾವದ ರಾಷ್ಟ್ರವಾಗಿ ಭಾರತವಿರಬೇಕೆಂದು ಬಲವಾಗಿ ಪ್ರತಿಪಾದಿಸಿದ್ದರು” ಎಂದು ಸ್ಮರಿಸಿದರು.
ಶಿಕ್ಷಣದ ಮಹತ್ವ ಹಾಗೂ ವಿದ್ಯಾರ್ಥಿಗಳಿಗೆ ಕರೆ: “ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ಅದು ಮನುಷ್ಯನನ್ನು ಉತ್ತಮ ನಾಗರಿಕನನ್ನಾಗಿ ರೂಪಿಸುವ ಶಕ್ತಿ. ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣವನ್ನು ‘ಹುಲಿಯ ಹಾಲು’ ಎಂದು ವರ್ಣಿಸಿದ್ದಾರೆ. ಇಂದಿನ ಯುವಪೀಳಿಗೆಯು ವ್ಯಸನಗಳಿಂದ ದೂರವಿದ್ದು, ದೇಶಭಕ್ತಿ ಮತ್ತು ಸಮಾಜ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು. ಧರ್ಮ, ಜಾತಿ ಹಾಗೂ ಭಾಷೆಯ ಗಡಿಗಳನ್ನು ಮೀರಿ ಮಾನವೀಯತೆಯನ್ನು ಗೌರವಿಸುವ ಮೂಲಕ ಶಾಂತಿಯುತ ಹಾಗೂ ಸಮೃದ್ಧ ಭಾರತ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾದ್ಯಾಯರಾದ ಪೃಥ್ವಿರಾಜ್, ಶಿಕ್ಷಕರಾದ ರಾಮಕೃಷ್ಣ, ಪರ್ವೀನ್, ರಮೇಶ್, ಪ್ರದೀಪ್ ಕುಮಾರ್, ರುಬಿನಾ, ಮಹೇಶ್, ರಿಜ್ವಾನ್ ಹಾಗೂ ಇಬಾದುಲ್ಲಾ (ನಿರೂಪಣೆ) ಸೇರಿದಂತೆ ಶಾಲೆಯ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಮೌಲಾನಾ ಆಜಾದ್ ಅವರಿಗೆ ಗೌರವ ನಮನ ಸಲ್ಲಿಸಿದರು.
– ವರದಿ: ವಿ.ಜಿ. ವೃಷಭೇಂದ್ರ, ಕೂಡ್ಲಿಗಿ

More Stories
ಬೆಲೆ ಏರಿಕೆ, ಅವೈಜ್ಞಾನಿಕ ಕಾಮಗಾರಿ ಖಂಡಿಸಿ ಸಿಪಿಐ(ಎಂ) ಬೃಹತ್ ಪ್ರತಿಭಟನೆ
ಚಂದ್ರಶೇಖರಪುರ: ಜನರ ಬಳಿಗೆ ಆಡಳಿತ; ಪ್ರಜಾ ಸೇವೆ ಆಂದೋಲನದಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅಭಯ
ಕೂಡ್ಲಿಗಿ: ಭಾರಿ ಶಬ್ದದ ಪಟಾಕಿ ಬಳಕೆಗೆ ಬ್ರೇಕ್ ಹಾಕಿ; ಪ್ರಾಣಿ-ಪಕ್ಷಿ, ರೋಗಿಗಳ ಸಂಕಟಕ್ಕೆ ಸ್ಪಂದಿಸಲು ಆಗ್ರಹ