ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಸಾಮಾಜಿಕ ಕಾರ್ಯಕರ್ತ ಮಾಸ್ತಪ್ಪ ನಾಯ್ಕ ಬಲ್ಸೆ ಆಗ್ರಹ

ಹೊನ್ನಾವರ (ಉತ್ತರ ಕನ್ನಡ): ತಾಲೂಕಿನ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತೀವ್ರ ಕೊರತೆ ಎದುರಾಗಿದ್ದು, ಸಾರ್ವಜನಿಕರು ತಮ್ಮ ದೈನಂದಿನ ಕೆಲಸಕಾರ್ಯಗಳಿಗಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ ಜನಸಾಮಾನ್ಯರಿಗೆ ಸಕಾಲದಲ್ಲಿ ಸೇವೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾಸ್ತಪ್ಪ ನಾಯ್ಕ ಬಲ್ಸೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ವಿಶೇಷವಾಗಿ ಕಂದಾಯ ಇಲಾಖೆ ಮತ್ತು ತಾಲೂಕು ಕಚೇರಿ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಅಗತ್ಯ ಸಂಖ್ಯೆಯ ಸಿಬ್ಬಂದಿ ಇಲ್ಲದಿರುವುದು ಆಡಳಿತ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಗ್ರಾಮೀಣ ಭಾಗಗಳಿಂದ ಪಟ್ಟಣಕ್ಕೆ ಬರುವ ರೈತರು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಬಡವರು ಸಣ್ಣಪುಟ್ಟ ಕೆಲಸಗಳಿಗೂ ಹಲವು ಬಾರಿ ಕಚೇರಿಗೆ ಎಡತಾಕಬೇಕಾಗಿದ್ದು, ಇದರಿಂದ ಅವರ ಅಮೂಲ್ಯ ಸಮಯ ಹಾಗೂ ಹಣ ವ್ಯರ್ಥವಾಗುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಭಾರಿ ಹೊರೆಯಿಂದ ಕಡತ ವಿಲೇವಾರಿ ವಿಳಂಬ: “ತಾಲೂಕಿನ ಹಲವು ಇಲಾಖೆಗಳಲ್ಲಿ ನಿವೃತ್ತರಾದವರ ಸ್ಥಾನಗಳಿಗೆ ಸಮರ್ಪಕ ನೇಮಕಾತಿ ನಡೆಯದ ಕಾರಣ, ಇರುವ ಅಧಿಕಾರಿಗಳಿಗೇ ಹೆಚ್ಚುವರಿ ಪ್ರಭಾರಿ ಜವಾಬ್ದಾರಿ ನೀಡಲಾಗಿದೆ. ತಮ್ಮ ಮೂಲ ಕಚೇರಿಯ ಕೆಲಸದ ಜೊತೆಗೆ ಇಲಾಖಾ ಸಭೆಗಳು, ಗ್ರಾ.ಪಂ. ಮಟ್ಟದ ಆಡಳಿತಾತ್ಮಕ ಕಾರ್ಯಗಳು ಹಾಗೂ ಪ್ರಜಾಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆ ಅಧಿಕಾರಿಗಳಿಗಿದೆ. ಇದರಿಂದ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಮತ್ತು ಕಡತಗಳ ಶೀಘ್ರ ವಿಲೇವಾರಿಗೆ ಸಮಯ ಸಿಗದಂತಾಗಿದೆ” ಎಂದು ವಿವರಿಸಿದ್ದಾರೆ.
ಸರ್ಕಾರಿ ಕಚೇರಿಗಳು ಜನಸಾಮಾನ್ಯರ ಸೇವೆಗಾಗಿ ಇರಬೇಕೇ ಹೊರತು, ಜನರನ್ನು ಅಲೆದಾಡಿಸುವಂತಾಗಬಾರದು. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಹೊನ್ನಾವರ ತಾಲೂಕಿನ ಎಲ್ಲಾ ಕಚೇರಿಗಳ ಖಾಲಿ ಹುದ್ದೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ, ನೇಮಕಾತಿಗೆ ಕ್ರಮ ಕೈಗೊಳ್ಳುವ ಮೂಲಕ ಆಡಳಿತ ಸೇವೆಯನ್ನು ಸುಗಮಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

More Stories
ಮಾಜಿ ಸೈನಿಕ, ನಾಮಧಾರಿ ಸಮಾಜದ ಹಿರಿಯ ಮುಖಂಡ ವಾಮನ ನಾಯ್ಕ ಮಂಕಿ ನಿಧನ
ಹೊನ್ನಾವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಗೆ ಜಿಲ್ಲೆಯ ‘ಉತ್ತಮ ಅರ್ಬನ್ ಬ್ಯಾಂಕ್’ ಪ್ರಶಸ್ತಿ
ಹೊನ್ನಾವರ: ಕೋಟೆಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜೃಂಭಣೆಯ ‘ಮಕ್ಕಳ ಹಬ್ಬ’